ಕಲಬುರಗಿ: ಒಂದು ಕುಟುಂಬ ಎಂದ ಮೇಲೆ ಅಸಮಾಧಾನ ಇರುತ್ತದೆ. ಅದರಲ್ಲೂ ಬಿಜೆಪಿ ದೊಡ್ಡ ಕುಟುಂಬ. ಇಬ್ಬರು-ಮೂರು ಶಾಸಕರಿಗೆ ಅಸಮಾಧಾನ ಇರುವುದು ಸಾಮಾನ್ಯ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಮುಂಬೈ ಭೇಟಿ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಲೂ ನಾನು ಹೋಗಲ್ಲ. ನಮ್ಮ ಹೈಕಮಾಂಡ್ ಸಮರ್ಥವಾಗಿದೆ. ಯಾವುದೇ ಸಮಸ್ಯೆ ಇದ್ದರೂ ಪರಿಹರಿಸುವ ಕೆಲಸ ಮಾಡುತ್ತಿದೆ ಎಂದರು.
ಇತ್ತೀಚಿನ ಬೆಳವಣಿಗೆಗಳ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಹೈಕಮಾಂಡ್‍ಗೆ 90 ಪುಟಗಳ ವರದಿ ನೀಡುವ ಬಗ್ಗೆಯೂ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿದ ಮೇಲೆ ನನ್ನ ಗಮನಕ್ಕೆ ಬಂದಿದೆ ಅಷ್ಟೇ ಎಂದು ಹೇಳಿದರು.
ಇದನ್ನೂ ಓದಿ :ಶರದ್ ಪವಾರ್ ನಿವಾಸದ ಸಭೆಗೆ ತೃಣಮೂಲ, ಆಪ್ ಸೇರಿ ಎಂಟು ರಾಜಕೀಯ ಪಕ್ಷಗಳು ಭಾಗಿ
ರಾಜ್ಯ ಬಿಜೆಪಿ ವಕ್ತಾರ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವ ಬಗ್ಗೆ ಅರುಣ್ ಸಿಂಗ್ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಜತೆಗೆ ಈ ಭಾಗದ ಅಭಿವೃದ್ಧಿ ಬಗ್ಗೆಯೂ ಅವರೊಂದಿಗೆ ಸಮಾಲೋಚನೆ ಮಾಡಿದ್ದೇವೆ. ಎರಡೂ ವಿಷಯಗಳ ಬಗ್ಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.