ಕೆ.ಆರ್.ಪುರ: ಬೆನ್ನಿಗಾನಹಳ್ಳಿ ಸಮೀಪದ ಕೃಷ್ಣಯ್ಯನಪಾಳ್ಯದಲ್ಲಿರುವ ಪುರಾತನ ಪ್ರಸಿದ್ಧ ಆಂಜನೇಸ್ವಾಮಿ ದೇವಾಲಯದಲ್ಲಿ ಆಂಜನೇಯಸ್ವಾಮಿ ಮೂರ್ತಿ ಪುನರ್ ಪ್ರತಿಷ್ಠಾಪನೆ, ಗಣಪತಿ ಸುಬ್ರಮಣ್ಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ರಾಜಗೊಪುರ ಪ್ರತಿಷ್ಠಾಪನೆ ಕುಂಬಾಬಿಷೇಕವನ್ನು ಚಿತ್ರದುರ್ಗದ ಗೊಲ್ಲಗಿರಿ ಕ್ಷೇತ್ರದ ಕೃಷ್ಣಯಾದವನಂದ ಸ್ವಾಮಿಗಳು ನೆರವೇರಿಸಿದರು.
ಸತತ ಮೂರು ದಿನಗಳಿಂದ ದೇವಾಲಯದಲ್ಲಿ ಗ್ರಾಮದೇವತೆ, ಕುಲದೇವತೆ ಪ್ರಾಥನೆ, ಗಂಗಾಯಾತ್ರೆ, ಗೋಪೂಜೆ, ಗುರುಪ್ರಾಥನೆ ಗಣಪತಿ ಪೂಜೆ, ಮಹಾಸಂಕಲ್ಪ, ಸೂಕ್ತಪಾರಾಯಣ ಹೋಮ, ಮಹಾಬಲಿ ಹೋಮ, ದೇವರಿಗೆ ವಿವಿಧ ಬಗೆಯ ಹಣ್ಣುಹಂಪಲು ಮತ್ತು ಅಷ್ಟದ್ರವ್ಯಗಳಿಂದ ಅಭಿಷೇಕ ನಡೆದಿದೆ.
ದೇವಾಲಯದಲ್ಲಿ ಪುನರ್‌ಪ್ರತಿಷ್ಠಾಪಿಸಲಾಗಿರುವ ಶ್ರೀ ಅಂಜನೇಯಸ್ವಾಮಿ, ಗಣಪತಿ ಮತ್ತು ಸುಬ್ರಮಣ್ಯಸ್ವಾಮಿ ವಿಗ್ರಹಗಳಿಗೆ ಚಿತ್ರದುರ್ಗದ ಗೊಲ್ಲಗಿರಿ ಕ್ಷೇತ್ರದ ಕೃಷ್ಣಯಾದವನಂದ ಸ್ವಾಮಿಗಳು ವಿಶೇಷ ಪೂಜೆ ನೆರವೇರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಅಗಮಿಸಿದ ಭಕ್ತರಿಗೆ ಸ್ವಾಮೀಜಿ ಅರ್ಶೀವಚನ ನೀಡಿದರು. ಸುತ್ತಮುತ್ತ ಗ್ರಾಮಗಳಿಂದ ಆಗಮಿಸಿದ ಸಾವಿರಾರು ¸ಕ್ತರಿಗೆ ಪ್ರಸಾಧ ವಿನಿಯೋಗ ಮಾಡಲಾಯಿತು.
ಅಂಜನೇಯಸ್ವಾಮಿ ದೇವಸ್ಥಾನದ ಟ್ರಸ್ಟಿ ಮತ್ತು ಪಾಲಿಕೆ ಸದಸ್ಯೆ ಮೀನಾಕ್ಷಿ ಲಕ್ಷಿಪತಿ ಮಾತನಾಡಿ, “ರಾಜ್ಯದಲ್ಲಿ ಕಾಲಕ್ಕೆ ಅನುಗುಣವಾಗಿ ಮಳೆಯಾಗದೆ ಬರದ ಛಾಯೆ ಅವರಿಸಿದೆ. ಉತ್ತಮ ಮಳೆ ಬೆಳೆಯಾಗಲು ಮೂರು ದಿನಗಳಿಂದ ದೇವಾಲಯದಲ್ಲಿ ಹೋಮ, ಹವನ ಪೂಜಕೈಂಕರ್ಯಗಳು ನಡೆಯುತ್ತಿವೆ,’ ಎಂದು ಹೇಳಿದರು.
ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಅಂಜನೇಯ ಸ್ವಾಮಿ ದೇವಾಲಯಕ್ಕೆ 300 ವರ್ಷಗಳ ಇತಿಹಾಸವಿದೆ. ದೇವಸ್ಥಾನ ಶಿಥಿಲಗೊಂಡಿರುವುದರಿಂದ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲಾಗಿದೆ ಎಂದು ತಿಳಿಸಿದರು. ಕೃಷ್ಣಯ್ಯನಪಾಳ್ಯ ಮಹಾ ಸಂಸ್ಥಾನದ ಪದಾಧಿಕಾರಿಗಳಾದ ಕೇಬಲ್ ಶ್ರೀನಿವಾಸ್, ನಂದಗೋಪಾಲ್, ಎಲ್.ಗೋಪಾಲ್, ಎನ್.ವೆಂಕಟೇಶ್, ಲಕ್ಷಿಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.