Advertisement

ಕೊಲೆಯತ್ನ, ದರೋಡೆ: ಜೀವಾವಧಿ ಶಿಕ್ಷೆ

12:41 PM Apr 25, 2018 | Harsha Rao |

ಕುಂದಾಪುರ:  ತಾಲೂಕಿನ ಕೆದೂರು ಸಮೀಪದ ಕೊರ್ಗಿಯ ಹೊಸ್ಮಠ ಗ್ರಾಮದಲ್ಲಿ ಎರಡೂವರೆ ವರ್ಷಗಳ ಹಿಂದೆ ತನ್ನ ಅಜ್ಜಿ ಮನೆಗೆ ಪ್ರವೇಶಿಸಿ ಕೊಲೆ ಯತ್ನ ನಡೆಸಿ, ದರೋಡೆ ಮಾಡಿದ್ದ   ರಂಜಿತ್‌ ಶೆಟ್ಟಿಗೆ ಮಂಗಳವಾರ ಇಲ್ಲಿನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

Advertisement

ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾ ಲಯದ ನ್ಯಾಯಾಧೀಶ ಎಂ. ಪ್ರಕಾಶ್‌ ಖಂಡೇರಿ ಅವರು ತೀರ್ಪು ಪ್ರಕಟಿಸಿದ್ದು ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಸಂತ್ರಸ್ತರ ಪರ ವಾದ ಮಂಡಿಸಿದ್ದರು.  

ಘಟನೆ ವಿವರ
ಕೊರ್ಗಿಯ ಹೊಸ್ಮಠc ಗ್ರಾಮದ ಮೆಕ್ಕೆಮನೆ ಕುಷ್ಟಪ್ಪ ಶೆಟ್ಟಿ ಅವರ ಸಂಬಂಧಿಯೇ ಆದ  ರಂಜಿತ್‌ ಶೆಟ್ಟಿ  2016ರ ಜ.4ರಂದು ಮಧ್ಯರಾತ್ರಿ 1.30ರ ವೇಳೆಯಲ್ಲಿ ಕುಷ್ಟಪ್ಪ ಅಲಿಯಾಸ್‌  ಕೃಷ್ಣಯ್ಯ ಶೆಟ್ಟಿ  ಮನೆಗೆ ತೆರಳಿದ್ದ. ಅಲ್ಲಿ ಕುಷ್ಟಪ್ಪ, ಕೊರಗಮ್ಮ ಶೆಡ್ತಿ ಹಾಗೂ ಅವರ ಪುತ್ರಿ ಚಂದ್ರಮತಿ ಶೆಟ್ಟಿ ಇದ್ದರು. ಕುಷ್ಟಪ್ಪ  ತಡರಾತ್ರಿ  ಮೂತ್ರ ವಿಸರ್ಜನೆಗೆಂದು ಹೊರ ಬಂದಾಗ  ರಂಜಿತ್‌  ಹಿಂದಿನಿಂದ  ಬಂದು ತಲೆ ಹಾಗೂ ಬೆನ್ನಿಗೆ ಕತ್ತಿ ಯಿಂದ ಕಡಿದಿದ್ದಾನೆ.

ತಂದೆಯನ್ನು ರಕ್ಷಿಸಲು ಬಂದ ಪುತ್ರಿ ಚಂದ್ರಮತಿ ಶೆಡ್ತಿಗೂ  ಕಡಿದು ಅವರಿಬ್ಬರನ್ನು ಐದು ಗಂಟೆಗಳ ಕಾಲ ಕೂಡಿ ಹಾಕಿದ್ದ.  ಚಿನ್ನ ಮತ್ತು ಹಣದ ಆಸೆಗಾಗಿ ತನ್ನ ಅಜ್ಜಿ 90ರ ವಯಸ್ಸಿನ ಕೊರಗಮ್ಮ ಶೆಡ್ತಿ  ಮೇಲೆ ಎರಗಿ ಕತ್ತಿ ಯಿಂದ ಕಡಿದಿದ್ದ. ಮರುದಿನ ಮುಂಜಾನೆಯಷ್ಟೆ ವಿಷಯ ಹೊರ ಜಗತ್ತಿಗೆ ಗೊತ್ತಾಗಿತ್ತು.

ಕ್ಷಿಪ್ರ ಕಾರ್ಯಾಚರಣೆ
ತನ್ನ ಖರ್ಚಿಗಾಗಿ ಒಡವೆ  ಕೇಳಿದ್ದ  ರಂಜಿತ್‌, ಅದು ಈಡೇರದಾಗ   ಈ  ಕೃತ್ಯವೆಸಗಿದ್ದ. ಅನಂತರ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಒಡವೆ ಗಳನ್ನು ದೋಚಿ ಪರಾರಿಯಾಗಿದ್ದ.  ಅದರಲ್ಲಿ ಆತನ ತಾಯಿಯ ಒಡವೆಗಳೂ ಇದ್ದವು. ಲೂಟಿ ಮಾಡಿದ ಚಿನ್ನವನ್ನು ಕೋಟೇಶ್ವರದ ಚಿನ್ನದ ಅಂಗಡಿ.ಲ್ಲಿ ಮಾರಲು ಯತ್ನಿಸಿದಾಗ  ಪೊಲೀಸರಿಗೆ ಸಿಕ್ಕಿಬಿದ್ದಿದ್ದ.

Advertisement

ರಂಜಿತ್‌ನ ತಾಯಿ ಮತ್ತು ಸಹೋದರಿ ಮನೆ ಬಿಟ್ಟು ಬೇರಡೆ ವಾಸವಾಗಿದ್ದರು. ರಂಜಿತ್‌ ಕೊರಗಮ್ಮ ಶೆಡ್ತಿ ಅವರ ಹಿರಿಯ ಪುತ್ರಿಯ ಮಗ.

ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸರ್ಕಲ್‌ ಇನ್ಸ್‌ ಪೆಕ್ಟರ್‌ ಪಿ.ಎಂ.ದಿವಾಕರ  ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.   

ಶಿಕ್ಷೆ ವಿವರ
ಕೊಲೆಯತ್ನ ನಡೆಸಿದ್ದಕ್ಕೆ ಜೀವಾವಧಿ ಶಿಕ್ಷೆ ಮತ್ತು 5 ಸಾ. ರೂ. ದಂಡ. ದಂಡ ತೆರಲು ತಪ್ಪಿದರೆ 1 ತಿಂಗಳು ಸಜೆ. ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ 5 ವರ್ಷ ಕಠಿನ ಸಜೆ ಹಾಗೂ 5 ಸಾ. ರೂ. ದಂಡ. ದಂಡ ತೆರಲು ತಪ್ಪಿದರೆ 1 ತಿಂಗಳು ಜೈಲು. ಜೀವ ಬೆದರಿಕೆ ಹಾಕಿದ್ದಕ್ಕೆ 1 ವರ್ಷದ ಶಿಕ್ಷೆ ಮತ್ತು 1 ಸಾ. ರೂ. ದಂಡ. ದಂಡ ತೆರಲು ತಪ್ಪಿದರೆ 10 ದಿನಗಳ ಸಜೆ. ಹಲ್ಲೆ ಮಾಡಿ ಸಾಮಾನ್ಯ ಗಾಯ ಉಂಟು ಮಾಡಿದ್ದಕ್ಕೆ 2 ವರ್ಷದ ಶಿಕ್ಷೆ ಹಾಗೂ 3 ಸಾ. ರೂ. ದಂಡ. ದಂಡ ತೆರಲು ತಪ್ಪಿದರೆ 20 ದಿನಗಳ ಶಿಕ್ಷೆ. ಹಲ್ಲೆ ಮಾಡಿ ತೀವ್ರತರ ಗಾಯಗೊಳಿಸಿದ್ದಕ್ಕೆ 5 ವರ್ಷಗಳ ಶಿಕ್ಷೆ ಹಾಗೂ 5 ಸಾ. ರೂ. ದಂಡ. ದಂಡ ಕೊಡದಿದ್ದರೆ 1 ತಿಂಗಳ ಸಜೆ. ಸುಲಿಗೆ ಮಾಡಿದ್ದಕ್ಕೆ 7 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಗಾಯಾಳುಗಳು ಪರಿಹಾರ ಪಡೆಯಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದೆಂದು ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next