ಸಾಮಾನ್ಯವಾಗಿ ಸಿನಿಮಾ ತಂತ್ರಜ್ಞರು ಕ್ಯಾಮೆರಾ ಹಿಂದೆ ನಿಂತು ಕೆಲಸ ಮಾಡೋದೇ ಹೆಚ್ಚು. ಈಗ ಒಂದು ಚಿತ್ರತಂಡದ ಬಹುತೇಕ ತಂತ್ರಜ್ಞರೆಲ್ಲರೂ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಾರೆ ಅನ್ನೋದೇ ಈ ಹೊತ್ತಿನ ಸುದ್ದಿ. ಅಂದಹಾಗೆ, ಆ ಸಿನಿಮಾಗೆ ಇನ್ನೂ ಟೈಟಲ್ ಇಟ್ಟಿಲ್ಲ. ನಾಗಮೂರ್ತಿ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಚಿತ್ರ. ಇನ್ನು, “ಹಾಫ್ ಮೆಂಟಲ್’ ಸಿನಿಮಾ ನಿರ್ಮಾಣ ಮಾಡಿದ್ದ ಶಶಿಕುಮಾರ್,
ಈ ಚಿತ್ರವನ್ನು ನಿರ್ಮಿಸುವುದರ ಜತೆಯಲ್ಲಿ ಒಂದು ಪವರ್‌ಫುಲ್ ಎನಿಸುವ ಎಸಿಪಿ ಪಾತ್ರ ನಿರ್ವಹಿಸುತ್ತಿದ್ದಾರೆ. ದಪ್ಪಗಿದ್ದ ಅವರು, ಈ ಚಿತ್ರಕ್ಕಾಗಿಯೇ ಹನ್ನೆರೆಡು ಕೆಜಿ ತೂಕ ಇಳಿಸಿ, ಕ್ಯಾಮೆರಾ ಮುಂದೆ ನಿಂತಿದ್ದಾರಂತೆ. ಮೊದಲ ನಿರ್ಮಾಣದ ಸಿನಿಮಾಗೆ ಸಿಕ್ಕಾಪಟ್ಟೆ ಖರ್ಚು ಮಾಡಿ ಅನುಭವ ಪಡಿದಿರುವ ಶಶಿಕುಮಾರ್, ಈಗ ಸಣ್ಣ ಬಜೆಟ್‌ನೊಂದಿಗೆ ಹೊಸತನದ ಚಿತ್ರ ಕೊಡಲು ಮುಂದಾಗಿದ್ದಾರೆ. ಈಗಾಗಲೇ ಒಂದು ವಾರದ ಚಿತ್ರೀಕರಣ ನಡೆದಿದೆ.
ನಿರ್ದೇಶಕ ನಾಗಮೂರ್ತಿ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. “ಇದೊಂದು ಮರ್ಡರ್ ಮಿಸ್ಟ್ರರಿ ಸಿನಿಮಾ. ನಾಲ್ವರು ಹುಡುಗರು ಒಂದು ಸ್ಥಳಕ್ಕೆ ಹೋಗಿ, ಅಲ್ಲಿ ದೆವ್ವ ಇದೆಯೋ ಇಲ್ಲವೋ ಎಂಬುದನ್ನು ಪತ್ತೆ ಮಾಡೋಕೆ ಹೋದಾಗ, ಒಂದು ಘಟನೆ ನಡೆಯುತ್ತೆ. ಆಮೇಲೆ ಏನೆಲ್ಲಾ ನಡೆಯುತ್ತೆ ಎಂಬುದೇ ಚಿತ್ರದ ಕಥಾವಸ್ತು. ಇದು ಹಾರರ್ ಜತೆಗೆ ಮರ್ಡರ್ ಮಿಸ್ಟರಿಯೂ ಇದೆ’ ಎಂದು ವಿವರ ಕೊಡುವ ನಿರ್ದೇಶಕರು,
ಇಲ್ಲಿ ಒಟ್ಟು ಏಳು ಮಂದಿ ಅಸೋಸಿಯೇಟ್ಸ್ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದಾರೆ. ಹೊಸ ಕಥೆ ಇರುವುದರಿಂದ ಹೊಸಬರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ನಾಗಮೂರ್ತಿ. ಕಥೆ ನಾಲ್ವರ ಸುತ್ತವೇ ಸುತ್ತಲಿದ್ದು, ಇಲ್ಲಿ ಡ್ಯಾನ್ಸ್ ಮಾಸ್ಟರ್ ಹಾಗೂ ಸಂಕಲನಕಾರರು ಸಹ ನಟಿಸುತ್ತಿರುವುದು ವಿಶೇಷ. ಚಿತ್ರಕ್ಕೆ ಅವಿನಾಶ್ ಕ್ಯಾಮೆರಾ ಹಿಡಿದಿದ್ದಾರೆ. ಬಿ.ಜೆ.ಭರತ್ ಹಿನ್ನೆಲೆ ಸಂಗೀತ ನೀಡಲಿದ್ದಾರೆ.