ಮಡಿಕೇರಿ: ಜನಾರ್ದನ ರೆಡ್ಡಿ ಬಿಜೆಪಿ ಲೀಡರ್ ಅಲ್ಲ, ನಿರಪರಾಧಿ ಎಂದು ಸಾಬೀತು ಆಗುವವರೆಗೆ ಬಿಜೆಪಿಗೆ ರೆಡ್ಡಿ ಎಂಟ್ರಿ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಪುನರುಚ್ಚರಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಅಲ್ಲ, ನಿರಪರಾಧಿ ಎಂದು ಸಾಬೀತು ಆಗುವವರೆಗೆ ಅವರನ್ನು ಪಕ್ಷಕ್ಕೆ ಸೇರಿಸುವ ಮಾತೇ ಇಲ್ಲವೆಂದು ಸ್ಪಷ್ಟಪಡಿಸಿದರು.
ಜನಾರ್ದನ ರೆಡ್ಡಿ ಅವರು ಬಿಜೆಪಿ ಪರ ಮಾಡುತ್ತಿರುವ ಪ್ರಚಾರಕ್ಕೂ, ನಮಗೂ ಸಂಬಂಧವಿಲ್ಲ. ಬಿಜೆಪಿಯ ಯಾವುದೇ ವೇದಿಕೆಯನ್ನು ಜನಾರ್ಧನ ರೆಡ್ಡಿ ಏರುವುದಿಲ್ಲ, ಒಂದು ವೇಳೆ ಅವರು ವೇದಿಕೆ ಏರಿದರೆ ನನಗೆ ವಾಟ್ಸಾಪ್ ಮಾಡಿ ಎಂದು ಮುರಳೀಧರ್ ರಾವ್ ಹೇಳಿದರು.
ಕಳೆದ 5 ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ಸಂಪೂರ್ಣ ವೈಫಲ್ಯವನ್ನು ಕಂಡಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ, ಇದೇ ಕಾರಣದಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 25ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆ ಯಾಗಿದೆ, ಕೊಲೆಗಡುಕರ ಬಂಧನ ವಾಗಿಲ್ಲ. ಇದಕ್ಕೆ ಗೃಹ ಇಲಾಖೆಯ ವೈಫಲ್ಯವೇ ಕಾರಣ ವೆಂದು ಮುರಳೀ ಧರ ರಾವ್ ಆರೋಪಿಸಿದರು. ಈ ಬಾರಿ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ಇದೇ ಸಂದರ್ಭ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮ ವಿಭಜನೆ ಮಾಡಿ ಲಿಂಗಾಯಿತರಲ್ಲಿ ಒಡಕು ಮೂಡಿಸುವ ಮೂಲಕ ಸಮಾಜವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಟಿಪ್ಪು ಜಯಂತಿ, ಬಹಮನಿ ಸುಲ್ತಾನರ ಜಯಂತಿಗಳ ಬಗ್ಗೆ ತೀವ್ರ ಆಸಕ್ತಿ ತೋರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಹೈದರಾಬಾದ್ ಕರ್ನಾಟಕ ಏಕೀಕರಣಕ್ಕೆ ಕಾರಣರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಜಯಂತಿ ಬಗ್ಗೆ ಯಾವುದೇ ಕಾಳಜಿ ಇಲ್ಲವೆಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಮನ್ಸೂಖ್ ಮಾಂಡವೀಯ, ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ ಡಾ| ಮಹೇಂದ್ರ ಸಿಂಗ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಮಡಿಕೇರಿ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಜಿಲ್ಲಾ ಬಿಜೆಪಿ ಪ್ರಮುಖರಾದ ಎಂ.ಬಿ. ದೇವಯ್ಯ, ಪ್ರ. ಕಾರ್ಯದರ್ಶಿ ರಾಬಿನ್ ದೇವಯ್ಯ, ವಿ.ಕೆ. ಲೋಕೇಶ್, ಶಾಂತೆಯಂಡ ರವಿಕುಶಾಲಪ್ಪ ಮೊದಲಾದವರಿದ್ದರು.