Advertisement

ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌: ಮುರಳಿ ಶ್ರೀಶಂಕರ್‌ ಫೈನಲ್‌ ನೆಗೆತ

10:44 PM Jul 16, 2022 | Team Udayavani |

ಯೂಜೀನ್‌ (ಯುಎಸ್‌ಎ): ಭಾರತದ “ಡಾರ್ಕ್‌ ಹಾರ್ಸ್‌’ ಮುರಳಿ ಶ್ರೀಶಂಕರ್‌ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಲಾಂಗ್‌ಜಂಪ್‌ನಲ್ಲಿ ಫೈನಲ್‌ಗೆ ನೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಈ ಪ್ರತಿಷ್ಠಿತ ಕ್ರೀಡಾಕೂಟದ ಪ್ರಶಸ್ತಿ ಸುತ್ತಿಗೇರಿದ ಭಾರತದ ಮೊದಲ ಪುರುಷ ಲಾಂಗ್‌ಜಂಪರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Advertisement

ಇವರೊಂದಿಗೆ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಸ್ಪರ್ಧೆಗಿಳಿದ ಅವಿನಾಶ್‌ ಸಬ್ಲೆ ಕೂಡ ಫೈನಲ್‌ ಪ್ರವೇಶಿಸಿದ್ದಾರೆ.

ಇದಕ್ಕೂ ಮುನ್ನ 2003ರ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಅಂಜು ಬಾಬ್ಬಿ ಜಾರ್ಜ್‌ ವನಿತಾ ವಿಭಾಗದಿಂದ ಫೈನಲ್‌ ಪ್ರವೇಶಿಸಿ ಕಂಚಿನ ಪದಕ ಜಯಿಸಿದ್ದರು.

ಲಾಂಗ್‌ಜಂಪ್‌ ಫೈನಲ್‌ ಸ್ಪರ್ಧೆ ಭಾರತೀಯ ಕಾಲಮಾನದಂತೆ ರವಿವಾರ ಬೆಳಗ್ಗೆ 6.50ಕ್ಕೆ ಆರಂಭವಾಗಲಿದೆ.

8 ಮೀಟರ್‌ ಸಾಧನೆ
ಅರ್ಹತಾ ಸುತ್ತಿನಲ್ಲಿ ಶ್ರೀಶಂಕರ್‌ ಸರಿಯಾಗಿ 8 ಮೀ. ದೂರಕ್ಕೆ ನೆಗೆದರು. ದ್ವಿತೀಯ ಪ್ರಯತ್ನದಲ್ಲಿ ಅವರಿಂದ ಈ ದೂರ ದಾಖಲಾಯಿತು. ಇದರೊಂದಿಗೆ “ಬಿ’ ವಿಭಾಗದ ದ್ವಿತೀಯ ಸ್ಥಾನಿಯಾದರು; ಒಟ್ಟಾರೆ 7ನೇ ಸ್ಥಾನ ಸಂಪಾದಿಸಿದರು.

Advertisement

ಭಾರತದ ಉಳಿದಿಬ್ಬರು ಸ್ಪರ್ಧಿಗಳಾದ ಜೆಸ್ವಿನ್‌ ಅಲ್ಡಿ†ನ್‌ (7.79 ಮೀ.) ಮತ್ತು ಮುಹಮ್ಮದ್‌ ಅನೀಸ್‌ ಯಾಹಿಯ (7.73 ಮೀ.) ಫೈನಲ್‌ ತಲುಪಲು ವಿಫ‌ಲರಾದರು. ಇವರಿಬ್ಬರು “ಎ’ ವಿಭಾಗದಲ್ಲಿ 9ನೇ ಹಾಗೂ 11ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. 8.15 ಮೀ.ಗಿಂತ ಹೆಚ್ಚಿನ ದೂರ ದಾಖಲಿಸಿದವರು ಅಥವಾ ಅತ್ಯುತ್ತಮ ಸಾಧನೆಗೈದ ಮೊದಲ 12 ಮಂದಿಗೆ ಫೈನಲ್‌ ಅವಕಾಶ ನೀಡುವುದು ಕೂಟದ ನಿಯಮವಾಗಿದೆ. ಈ ದೂರ ದಾಖಲಿಸಿದವರು ಇಬ್ಬರು ಮಾತ್ರ. ಜಪಾನಿನ ಯುಕಿ ಹಶಿಯೋಕ (8.18 ಮೀ.) ಮತ್ತು ಅಮೆರಿಕದ ಮಾಕ್ವಿìಸ್‌ ಡೆಂಡಿ (8.16 ಮೀ.).

ಹೀಟ್‌ನಲ್ಲಿ ಅವಿನಾಶ್‌ ತೃತೀಯ
2019ರ ದೋಹಾ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲೂ ಫೈನಲ್‌ ಪ್ರವೇಶಿಸಿದ್ದ ಅವಿನಾಶ್‌ ಸಬ್ಲೆ ಹೀಟ್‌ ನಂ.3ರಲ್ಲಿ 8:18.75 ಸೆಕೆಂಡ್ಸ್‌ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾದರು. ಫೈನಲ್‌ ಸ್ಪರ್ಧೆ ಮಂಗಳವಾರ ಬೆಳಗ್ಗೆ ನಡೆಯಲಿದೆ.

ಕಳೆದ ಡೈಮಂಡ್‌ ಲೀಗ್‌ ಚಾಂಪಿಯನ್‌ಶಿಪ್‌ನಲ್ಲಿ ಸಬ್ಲೆ 5ನೇ ಸ್ಥಾನ ಪಡೆದಿದ್ದರು.

ಹಿಂದೆ ಸರಿದ ತೂರ್‌
ಅಮೆರಿಕಕ್ಕೆ ಆಗಮಿಸಿದ ಬಳಿಕ ತೊಡೆಯ ಸ್ನಾಯು ಸೆಳೆತಕ್ಕೆ ಸಿಲುಕಿದ ಶಾಟ್‌ಪುಟರ್‌ ತೇಜಿಂದರ್‌ಪಾಲ್‌ ಸಿಂಗ್‌ ತೂರ್‌ ಸ್ಪರ್ಧೆಯಿಂದ ಹಿಂದೆ ಸರಿದರು.

ಪುರುಷರ ಹಾಗೂ ವನಿತೆಯರ 20 ಕಿ.ಮೀ. ರೇಸ್‌ ವಾಕ್‌ನಲ್ಲಿ ಪಾಲ್ಗೊಂಡಿದ್ದ ಸಂದೀಪ್‌ ಕುಮಾರ್‌ ಮತ್ತು ಪ್ರಿಯಾಂಕಾ ಗೋಸ್ವಾಮಿ ತಮ್ಮ ರಾಷ್ಟ್ರೀಯ ದಾಖಲೆಗಿಂತಲೂ ಕಳಪೆ ಪ್ರದರ್ಶನ ನೀಡಿ ಹೊರಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next