Advertisement

ಮುನ್ನಾರು ಭೂಕುಸಿತ: ಅವಶೇಷಗಳಡಿಯಿಂದ 15 ಮೃತದೇಹ ಹೊರಕ್ಕೆ

06:55 PM Aug 07, 2020 | Hari Prasad |

ಮುನ್ನಾರ್: ಕೇರಳಕ್ಕೆ ಮತ್ತೆ ಆಗಸ್ಟ್ ಶಾಪ ವಕ್ಕರಿಸಿದೆ. ರಾಜ್ಯಾದ್ಯಂತ ಕುಂಭದ್ರೋಣ ಮಳೆಯಾಗುತ್ತಿದೆ.

Advertisement

ಹೆಚ್ಚಿನ ಎಲ್ಲಾ ನದಿಗಳೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಮಲ್ಲಪ್ಪುರಂ, ಇಡುಕ್ಕಿ ಹಾಗೂ ವಯನಾಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ, ಮತ್ತು ಒಂಭತ್ತು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಈಗಾಗಲೇ ಘೋಷಿಸಿದೆ.

ಇನ್ನು, ಇಂದು ಮುಂಜಾನೆ ಮುನ್ನಾರ್ ನ ರಾಜಾಮಲೆಯಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತ ಇದುವರೆಗೆ 16 ಜೀವಗಳನ್ನು ಬಲಿಪಡೆದುಕೊಂಡಿದೆ. ರಕ್ಷಣಾ ಪಡೆಗಳು ಆರು ಜನರನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತಿದ್ದು ಅವರಲ್ಲಿ ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: ಧಾರಾಕಾರ ಮಳೆ: ಕೇರಳದ ಮುನ್ನಾರ್ ನಲ್ಲಿ ಭೂಕುಸಿತ, 5 ಸಾವು, ಅವಶೇಷಗಳಡಿ 80 ಮಂದಿ?

ಕುಸಿದ ಗುಡ್ಡದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರಬಹುದಾಗಿರುವವರಿಗಾಗಿ ಶೋಧ ಕಾರ್ಯವನ್ನು ಭರದಿಂದ ನಡೆಸಲಾಗುತ್ತಿದೆ.

Advertisement

ಮುನ್ನಾರು ಪಟ್ಟಣದಿಂದ 28 ಕಿಲೋಮೀಟರ್ ದೂರದಲ್ಲಿರುವ ಹಾಗೂ ಇರವಿಕುಲಂ ರಾಷ್ಟ್ರೀಯ ವನ್ಯಧಾಮಕ್ಕಿಂತ 20 ಕಿಲೋಮೀಟರ್ ಅಂತರದಲ್ಲಿರುವ ಈ ಚಹಾ ಪ್ಲಾಂಟೇಷನ್ ನ ಆಸುಪಾಸಿನಲ್ಲಿ ಸುಮಾರು 80 ಜನರು ವಾಸಿಸುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಇವರೆಲ್ಲರೂ ಕಣ್ಣನ್ ದೇವನ್ ಕಂಪೆನಿಗಾಗಿ ಕೆಲಸ ಮಾಡುತ್ತಿದ್ದರು.

‘ಇಲ್ಲಿನ ನಾಲ್ಕು ಸಾಲುಗಳ ತಗಡು ಶೀಟಿನಿಂದ ನಿರ್ಮಿಸಿದ್ದ ಮನೆಗಳ ಮೇಲೆ ಶುಕ್ರವಾರ ಬೆಳಗಿನ ಜಾವ ಇದ್ದಕ್ಕಿದ್ದಂತೆ ಭಾರೀ ಗಾತ್ರದಲ್ಲಿ ಗುಡ್ಡದ ಮಣ್ಣು ಜರಿದು ಬಿತ್ತು. ಮತ್ತು ನಾವೆಲ್ಲರೂ ಏನಾಗುತ್ತಿದೆ ಎಂದು ಯೋಚಿಸಿ ಅಲ್ಲಿಂದ ಹೊರಬರುವಷ್ಟರಲ್ಲಿ ಭಾರೀ ಶಬ್ದದೊಂದಿಗೆ ಗುಡ್ಡ ನಮ್ಮ ಈ ಶೆಡ್ ಗಳ ಮೇಲೆ ಕುಸಿದುಬಿತ್ತು’ ಎಂದು ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿರುವ ಸಂತ್ರಸ್ತರೊಬ್ಬರು ಮನೋರಮಾ ವೆಬ್ ಸೈಟ್ ಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ರಾಜಾಮಲೆಯನ್ನು ಮುನ್ನಾರ್ ನೊಂದಿಗೆ ಸಂಪರ್ಕಿಸುವ ಪೆರಿಯಾರ್ ಸೇತುವೆಯೂ ಸಹ ಈ ಗುಡ್ಡ ಕುಸಿತದಿಂದ ಹಾನಿಗೀಡಾಗಿದೆ. ಮತ್ತು ಈ ಭಾಗದಲ್ಲಿದ್ದ ಮೊಬೈಲ್ ಟವರ್ ಸಹ ಘಟನೆಯಿಂದ ಹಾನಿಗೊಳಗಾದ ಕಾರಣ ಈ ಭೀಕರ ಗುಡ್ಡ ಕುಸಿತದ ವಿಚಾರ ಹೊರಜಗತ್ತಿಗೆ ತಿಳಿಯಲು ಸರಿಸುಮಾರು 5 ಗಂಟೆಗಳು ಬೇಕಾಗಿತ್ತು. ಅದೂ ಘಟನಾ ಸ್ಥಳದಿಂದ ತಮ್ಮನ್ನು ರಕ್ಷಿಸಿಕೊಂಡ ಕೆಲವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಈ ಭೀಕರ ಘಟನೆ ಬೆಳಕಿಗೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next