ಅಜೆಕಾರು: ಸರಕಾರಿ ಪದವಿ ಪೂರ್ವ ಕಾಲೇಜು ಮುನಿಯಾಲು ಇದರ ಪ್ರೌಢ ಶಾಲಾ ವಿಭಾಗದ ಮೂವರು ಶಿಕ್ಷಕರ ಮೇಲೆ ಸುಳ್ಳು ಕೇಸು ದಾಖಲಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಪೋಷಕರು ಹಾಗೂ ಸ್ಥಳೀಯರು ಸೇರಿ ಬೃಹತ್ ಪ್ರತಿಭಟನೆ ನ. 19ರಂದು ಮುನಿಯಾಲು ಪೇಟೆಯಲ್ಲಿ ನಡೆಸಿದರು. ಈ ಸಂದರ್ಭ ಮುನಿಯಾಲು ಪೇಟೆಯ ವರ್ತಕರು ಹಾಗೂ ರಿಕ್ಷಾ ಚಾಲಕ ಮಾಲಕರು ಪ್ರತಿಭಟನೆ ಬೆಂಬಲಿಸಿ ಸ್ವಇಚ್ಛೆಯಿಂದ ಬಂದ್ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿದರು. ಶಿಕ್ಷಕರ ಮೇಲೆ ಸುಳ್ಳು ಕೇಸು ದಾಖಲಿಸಿರುವುದರಿಂದ ಮನನೊಂದು ಕಾಲೇಜು ಅಭಿವೃದ್ಧಿ ಸಮಿತಿಗೆ ತತ್‌ಕ್ಷಣದಿಂದಲೇ ರಾಜೀನಾಮೆ ನೀಡುತ್ತಿರುವುದಾಗಿ ಮುಟ್ಲುಪಾಡಿ ಸತೀಶ್ ಶೆಟ್ಟಿ ಪ್ರತಿಭಟನಾ ಸಭೆಯಲ್ಲಿ ಹೇಳಿದರು. ಸದಸ್ಯ ಆನಂದ ಪೂಜಾರಿ ಸಹ ಸಮಿತಿಗೆ ರಾಜೀನಾಮೆ ಸಲ್ಲಿಸಿದರು.
ಉದ್ಯಮಿ ಉದಯಕುಮಾರ್ ಶೆಟ್ಟಿ, ವಿದ್ಯಾರ್ಥಿಗಳ ಪರವಾಗಿ ವಿದ್ಯಾರ್ಥಿನಿ ಶ್ವೇತಾ, ಉದ್ಯಮಿ ದಿನೇಶ್ ಪೈ, ದಲಿತ ಸಂಘಟನೆಯ ಮಾಜಿ ಸಂಚಾಲಕರಾದ ಗೋಪಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶಂಕರ್ ಶೆಟ್ಟಿ ಅಂಡಾರು, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಆನಂದ ಪೂಜಾರಿ, ಉದ್ಯಮಿ ಉಮೇಶ್ ಹೆಗ್ಡೆ, ಮುನಿಯಾಲು ಶಂಕರ್ ಶೆಟ್ಟಿ, ಉದ್ಯಮಿ ಸುದೀಪ್ ಅಜಿಲ ಸುಳ್ಳು ಕೇಸು ದಾಖಲಿಸಿರುವುದನ್ನು ವಿರೋಧಿಸಿ ಮಾತನಾಡಿದರು.
ವರಂಗ ಗ್ರಾ.ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ, ಹಿರಿಯರಾದ ಶ್ರೀಧರ ಪೈ, ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್, ತಾ.ಪಂ. ಸದಸ್ಯೆ ಸುಲತಾ ರಾಮಕೃಷ್ಣ, ಹಳೆವಿದ್ಯಾರ್ಥಿ ಸಂಘದ ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು. ಪ್ರತಿಭಟನಾ ಸಭೆಗೂ ಮುನ್ನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಕಾಲೇಜಿನಿಂದ ಮುನಿಯಾಲು ಕೆಳಪೇಟೆವರೆಗೆ ಮೌನ ಜಾಥಾ ನಡೆಯಿತು. ಪ್ರತಿಭಟನಾ ಸಭೆಯ ಅನಂತರ ಹೆಬ್ರಿ ತಾಲೂಕು ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಹಳೆವಿದ್ಯಾರ್ಥಿ ಸಂಘದ ರಾಮಚಂದ್ರ ನಾಯಕ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾಲೇಜು ಅಭಿವೃದ್ಧಿ ಸಮಿತಿಯ ಶಂಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿಗಳಾದ ಸಮೃದ್ಧಿ ಪ್ರಕಾಶ್ ಶೆಟ್ಟಿ, ರತ್ನಾಕರ ಪೂಜಾರಿ, ಹರೀಶ್ ಪೂಜಾರಿ, ಕೃಷ್ಣ ನಾಯ್ಕ ಸಹಕರಿಸಿದರು.