Advertisement
ಕಾಂಗ್ರೆಸ್‌ನ ಮುನಿರತ್ನ 1,08,064 ಮತ ಗಳಿಸುವ ಮೂಲಕ ಬಿಜೆಪಿಯ ಮುನಿರಾಜುಗೌಡ ಅವರನ್ನು 25,492 ಮತಗಳ ಅಂತರದಿಂದ ಪರಾಭವಗೊಳಿಸಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುನಿರಾಜುಗೌಡ 82,572 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಟಿಕೆಟ್ ಸಿಗದ ಕಾರಣ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಜಿ.ಎಚ್.ರಾಮಚಂದ್ರ 60,360 ಮತ ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
Related Articles
Advertisement
ನಂತರದ ಸುತ್ತಿನಲ್ಲಿ ಮುನಿರತ್ನ ಅವರ ಮುನ್ನಡೆಯ ಅಂತರ ಕಡಿಮೆಯಾದರೂ ಹಾಗಿದ್ದರೂ ಅಂತಿಮ 18ನೇ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡ ಮುನಿರತ್ನ 25,492 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಮುನಿರತ್ನ ಅವರು ಜೆಡಿಎಸ್‌ನ ಕೆ.ಎಲ್.ತಿಮ್ಮನಂಜಯ್ಯ ಅವರನ್ನು 18,813 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಖಾಸಗಿ ಕಟ್ಟಡದಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಮತದಾನವು ಮೇ 28ಕ್ಕೆ ಮುಂದೂಡಿಕೆಯಾಯಿತು. ನಂತರದ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದರೂ ದೋಸ್ತಿ ಪಕ್ಷಗಳು ಕ್ಷೇತ್ರದಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದರಿಂದ ತೀವ್ರ ಕುತೂಹಲ ಮೂಡಿಸಿತ್ತು.
ಬಿಜೆಪಿ ಅಭ್ಯರ್ಥಿ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಅಭ್ಯರ್ಥಿ ಪರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಪ್ರಚಾರ ನಡೆಸಿದ್ದರು. ಆದರೆ ಮುನಿರತ್ನ ಪರ ಪಕ್ಷದ ಹಿರಿಯ ಮುಖಂಡರಿಗಿಂತ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಬಿರುಸಿನ ಪ್ರಚಾರ ನಡೆಸಿದ್ದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಸಂಖ್ಯಾಬಲ 14: ಮೇ 12ರಂದು ನಡೆದ ಬೆಂಗಳೂರಿನ 26 ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ 13 ಸ್ಥಾನ ಪಡೆದರೆ ಬಿಜೆಪಿ 11 ಹಾಗೂ ಜೆಡಿಎಸ್ 2 ಸ್ಥಾನ ಗಳಿಸಿತ್ತು. ಇದೀಗ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಬಲ 14ಕ್ಕೆ ಏರಿಕೆಯಾಗಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸದಸ್ಯ ಬಲ 78ಕ್ಕೆ ಏರಿಕೆಯಾಗಿದೆ (ಜಮಖಂಡಿ ಶಾಸಕರಾಗಿದ್ದ ಸಿದ್ದು ನ್ಯಾಮಗೌಡ ನಿಧನ ಹಿನ್ನೆಲೆಯಲ್ಲಿ ಒಂದು ಸ್ಥಾನ ಕಡಿಮೆಯಾಗಿದೆ).