Advertisement

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

12:33 PM Nov 08, 2024 | Team Udayavani |

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಗುರುವಾರ ಸಂತ್ರಸ್ತೆಯನ್ನು ವಿಕಾಸಸೌಧಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು.

Advertisement

ಮತ್ತೂಂದೆಡೆ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಎಸ್‌ ಐಟಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಿದ್ದಾರೆ.

ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ವಿಕಾಸಸೌಧಕ್ಕೆ ಸಂತ್ರಸ್ತೆಯನ್ನು ಕರೆತಂದ ಎಸ್‌ಐಟಿ ಅಧಿಕಾರಿಗಳ ತಂಡ, ಈ ಹಿಂದೆ ತೋಟಗಾರಿಕೆ ಸಚಿವರಾಗಿದ್ದ ಸಂದರ್ಭದಲ್ಲಿ ಮುನಿರತ್ನಗೆ ನೀಡಿದ್ದ, ಸದ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌ಗೆ ನೀಡಿರುವ 3ನೇ ಮಹಡಿಯ 334ನೇ ಕೋಣೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು.

ಸಂತ್ರಸ್ತೆಯಿಂದ ಲಿಖಿತ ಮತ್ತು ಮೌಖಿಕ ಹೇಳಿಕೆ: ಯಾವ ಸ್ಥಳದಲ್ಲಿ ನಿಮ್ಮ ಮೇಲೆ ಶಾಸಕ ಮುನಿರತ್ನ ಲೈಂಗಿಕ ದೌರ್ಜನ್ಯ ಎಸಗಿದರು? ಎಂಬುದು ಸೇರಿ ವಿವಿಧ ಪ್ರಶ್ನೆಗಳನ್ನು ಕೇಳಿ, ಸಂತ್ರಸ್ತೆಯಿಂದ ಲಿಖಿತ ಮತ್ತು ಮೌಖಿಕ ಹೇಳಿಕೆ ಪಡೆದುಕೊಂಡರು. ಬಳಿಕ ಅದನ್ನು ವಿಡಿಯೋ ಕೂಡ ಮಾಡಿಕೊಳ್ಳಲಾಯಿತು. ಹೀಗೆ ಮಧ್ಯಾಹ್ನ 1.30ರವರೆಗೆ ಕೋಣೆಯಲ್ಲೇ ಸ್ಥಳ ಮಹಜರು ನಡೆಸಿದ ಅಧಿಕಾರಿಗಳು, ಬಳಿಕ ಸಿಐಡಿ ಕಚೇರಿಗೆ ಕರೆದೊಯ್ದು ಮತ್ತೂಮ್ಮೆ ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವಿಕಾಸಸೌಧದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಮಾಡಿದ್ದ ಸಂತ್ರಸ್ತೆ: ಈ ಹಿಂದೆ ಸಂತ್ರಸ್ತೆ ಕಗ್ಗಲೀಪುರ ಠಾಣೆಯಲ್ಲಿ ದೂರು ನೀಡುವಾಗ, ಶಾಸಕ ಮುನಿರತ್ನ ಸಚಿವರಾಗಿದ್ದಾಗ ವಿಕಾಸಸೌಧದಲ್ಲಿ ನೀಡಲಾಗಿದ್ದ ಅವರ ಕೊಠಡಿಯಲ್ಲೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅಲ್ಲಿಯಿಂದಲೇ ತನಗೆ ವಿಡಿಯೋ ಕಾಲ್‌ ಮಾಡಿ ನಗ್ನವಾಗುವಂತೆ ಪೀಡಿಸುತ್ತಿದ್ದರು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯನ್ನು ಕರೆ ತಂದು ಮಹಜರು ಮಾಡಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

Advertisement

ಕೆಲವೇ ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಕೆ

ಸೆ.18ರಂದು ಸಂತ್ರಸ್ತೆ ದೂರಿನ ಅನ್ವಯ ಕಗ್ಗಲೀಪುರ ಠಾಣೆ ಪೊಲೀಸರು ಸೆ.21ರಂದು ಮುನಿರತ್ನರನ್ನು ಬಂಧಿಸಿದ್ದರು. ಬಳಿಕ ಆರೋಪಿ ಹಾಗೂ ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿಸಿದ್ದರು. ಬಳಿಕ ಮೊಬೈಲ್‌ ಗಳನ್ನು ಜಪ್ತಿ ಮಾಡಿ, ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಿದ್ದರು. ಅಲ್ಲದೆ, ಮುನಿರತ್ನರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದರು. ಇದೀಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಹಾಗೂ ವೈದ್ಯಕೀಯ ವರದಿಗಳು ತನಿಖಾ ತಂಡಕ ಕೈ ಸೇರಿದೆ. ಜತೆಗೆ ಸಂತ್ರಸ್ತೆ ಆರೋಪಿಸಿದಂತೆ ಮುನಿರತ್ನ ಮತ್ತು ತಂಡ ಯಾವ ರೀತಿ ಹನಿಟ್ರ್ಯಾಪ್‌ ಮಾಡುತ್ತಿದ್ದರು. ಅದಕ್ಕಾಗಿ ಯಾವ ಕೋಣೆಯಲ್ಲಿ, ಯಾವ ಭಾಗದಲ್ಲಿ ರಹಸ್ಯ ಕ್ಯಾಮೆರಾ ಇಡುತ್ತಿದ್ದರು ಸೇರಿ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾಗಶಃ ತನಿಖೆ ಪೂರ್ಣಗೊಳಿಸಿರುವ ಎಸ್‌ಐಟಿ ಅಧಿಕಾರಿ ಗಳು, ಸುಮಾರು 60ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ, 40ಕ್ಕೂ ಹೆಚ್ಚು ಸಾಕ್ಷ್ಯಗಳು ಸೇರಿ ಅಂದಾಜು 900ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿಯನ್ನು ಇನ್ನು 20 ದಿನಗಳಲ್ಲಿ ಕೋರ್ಟ್‌ಗೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next