Advertisement

ಸಚಿವರ ಮನವೊಲಿಕೆಗೂ ಬಗ್ಗದ ಪೌರಕಾರ್ಮಿಕರು

11:33 AM Oct 06, 2018 | Team Udayavani |

ಮೈಸೂರು: ಬೇಡಿಕೆ ಈಡೇರಿಸುವವರೆಗೂ ಸ್ವತ್ಛತಾ ಕೆಲಸಕ್ಕೆ ಇಳಿಯುವುದಿಲ್ಲವೆಂಬ ಪೌರಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಸಚಿವರಿಬ್ಬರ ಮನವೊಲಿಸುವ ಪ್ರಯತ್ನಕ್ಕೂ ಸೊಪ್ಪು ಹಾಕದೆ, ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ.

Advertisement

ಸೇವೆ ಕಾಯಂಗೊಳಿಸುವುದು, ಬೆಳಗಿನ ಉಪಹಾರಕ್ಕೆ ಹಣ ಪಾವತಿಸುವುದು ಸೇರಿದಂತೆ ಮತ್ತಿತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಾಲಿಕೆ ಪೌರಕಾರ್ಮಿಕರು ಕಳೆದ ಮೂರು ದಿನಗಳಿಂದ ನಗರದಲ್ಲಿ ಸ್ವತ್ಛತಾ ಕಾರ್ಯ ಸ್ಥಗಿತಗೊಳಿಸಿ, ಮುಷ್ಕರ ನಡೆಸುತ್ತಿರುವ ಪರಿಣಾಮ ನಗರದೆಲ್ಲೆಡೆ ದುರ್ವಾಸನೆ ಬೀರುತ್ತಿದೆ.

ನಾಡಹಬ್ಬ ದಸರಾ ಮಹೋತ್ಸವಕ್ಕೆ ಕೆಲ ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಮುಷ್ಕರ, ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಜಿಲ್ಲೆಯ ಇಬ್ಬರೂ ಸಚಿವರು ನಡೆಸಿದ ಪ್ರತಿಭಟನಾಕಾರರ ಮನವೊಲಿಕೆ ಯತ್ನ ವಿಫ‌ಲವಾಗಿರುವ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಮುಷ್ಕರದಲ್ಲಿ ತೊಡಗಿದ್ದಾರೆ. 

ಸಚಿವರಿಂದ ಭರವಸೆ: ಪೌರಕಾರ್ಮಿಕರು ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ತೆರಳಿದ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್‌, ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಪೌರಕಾರ್ಮಿಕರ ಸಮಸ್ಯೆ ಕೇವಲ ಮೈಸೂರಿನಲ್ಲಿ ಮಾತ್ರವಲ್ಲ, ರಾಜ್ಯಾದ್ಯಂತ ಇರುವುದರಿಂದ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಹೀಗಾಗಿ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಒಂದು ತಿಂಗಳಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ನಾಡಹಬ್ಬ ದಸರೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಾಗಿರುವುದರಿಂದ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. 

Advertisement

ಮನವೊಲಿಕೆ ವಿಫ‌ಲ: ಇಬ್ಬರೂ ಸಚಿವರ ಮನವೊಲಿಕೆ ಹಾಗೂ ಭರವಸೆಗೆ ಒಪ್ಪದ ಪೌರಕಾರ್ಮಿಕರು ತಮ್ಮ ಬೇಡಿಕೆಗಳು ಈಡೇರುವವರೆಗೂ ಹಾಗೂ ಶನಿವಾರ ನಡೆಯುವ ಸಭೆ ಬಳಿಕ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು. ಬೇಡಿಕೆ ಈಡೇರುವವರೆಗೂ ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. 

ಕಸ ಸುರಿದು ಅಕ್ರೋಶ: ಪ್ರತಿಭಟನೆಯ ನಡುವೆಯೂ ಅಧಿಕಾರಿಗಳು ಕಾಯಂ ನೌಕರರನ್ನು ಬಳಸಿಕೊಂಡು ಅರಸು ರಸ್ತೆ, ಕೃಷ್ಣರಾಜ ವೃತ್ತದಲ್ಲಿ ಸ್ವತ್ಛತೆ ನಡೆಸುತ್ತಿದ್ದನ್ನು ಖಂಡಿಸಿದ ಪ್ರತಿಭಟನಾಕಾರರು, ಅರಸು ರಸ್ತೆ ಹಾಗೂ ಕೆ.ಆರ್‌.ವೃತ್ತದಲ್ಲಿ ಕಸ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದ ಹೊರತು ಸ್ವತ್ಛ ಕಾರ್ಯ ನಡೆಯುವುದಿಲ್ಲವೆಂದು ಆಕ್ರೋಶ ತೋರಿದರು. 

ಪ್ರತಿಭಟನೆಯಲ್ಲಿ ರಾಜ್ಯ ವರಿಷ್ಠ ಮಂಡಳಿ ಅಧ್ಯಕ್ಷ ಎನ್‌.ಕುಮಾರ, ರಾಜ್ಯ ಉಪಾಧ್ಯಕ್ಷ ಆರ್‌.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ಜಿಲ್ಲಾಧ್ಯಕ್ಷ ಎನ್‌.ನರಸಿಂಹ, ಶ್ರೀನಿವಾಸ, ಮಂಚಯ್ಯ, ದಾಸ್‌, ವಸಂತಾ ಇನ್ನಿತರರಿದ್ದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೂರು ವರ್ಷದ ಹಿಂದೆ ಘೋಷಿಸಿರುವ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟಿಸುತ್ತಿದ್ದೇವೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸದ ಹೊರತು ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ. 
-ನಾರಾಯಣ, ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next