ಹರಪನಹಳ್ಳಿ: ಪಟ್ಟಣದ ಆಚಾರ್ಯ ಬಡಾವಣೆಗೆ ಪುರಸಭೆ ಅಧ್ಯಕ್ಷ ಎಚ್.ಕೆ. ಹಾಲೇಶ್ ದಿಢೀರ್ ಭೇಟಿ ವಾರ್ಡ್‌ನ ಜನರ ಸಮಸ್ಯೆ ಅಲಿಸಿ ಪರಿಹಾರಕ್ಕೆ ಸೂಚಿಸಿದರು. ಡಿ. ರಾಮನಮಲಿ ಮುಂಭಾಗ ಒಳ ಚರಂಡಿ ಯೋಜನೆಯ ಚೇಂಬರ್ ನಿರ್ಮಿಸಿ ಮಣ್ಣು ಹಾಕದೇ ರಸ್ತೆಯಲ್ಲಿ ಹಾಗೆ ಬಿಟ್ಟ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಮಕ್ಕಳು ರಸ್ತೆಯಲ್ಲಿ ನಡೆದಾಡುವಂತಿಲ್ಲ. ಒಂದು ದಿನವೂ ಬಡಾವಣೆ ಚರಂಡಿಗಳನ್ನು ಸ್ವತ್ಛಗೊಳಿಸಲ್ಲ. ಇದರಿಂದ ಸೊಳ್ಳೆ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಹಂದಿಗಳ ಹಾವಳಿಗೆ ಮನೆಯಿಂದ ಮಕ್ಕಳು ಹೊರ ಬರದಂತಾಗಿದೆ ಎಂದು ನಿವಾಸಿಗಳು ಅಧ್ಯಕ್ಷರ ಗಮನಕ್ಕೆ ತಂದರು.
ಒಳ ಚರಂಡಿ ಯೋಜನೆಯ ಇಂಜಿನಿಯರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಒಂದು ವಾರದೊಳಗೆ ಒಳ ಚರಂಡಿಗೆ ಮನೆಗಳ ಶೌಚಾಲಯ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು. ಕೂಡಲೇ ಜೆಸಿಬಿ ಯಂತ್ರ ಕರೆಸಿ ಚರಂಡಿಗಳಲ್ಲಿ ಹಾಗೂ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಳನ್ನು ಸ್ವತ್ಛಗೊಳಿಸಲಾಯಿತು.
ಖಾಲಿ ವೇಶನದಲ್ಲಿ ಹಂದಿಗಳ ವಾಸ ಹಾಗೂ ಬೆಳದಿರುವ ಗಿಡ ಗಂಟೆಗಳಿಂದ ವಿಷ ಜಂತುಗಳು ಬರುತ್ತಿವೆ ಎಂದು ವಾರ್ಡ್‌ನ ನಿವಾಸಿಗಳು ದೂರಿದರು. ಖಾಲಿ ವೇಶನಗಳನ್ನು ಮಾಲೀಕರು ಸ್ವತ್ಛವಾಗಿಟ್ಟುಕೊಳ್ಳಬೇಕು. ಇಲ್ಲವೇ ಪುರಸಭೆವತಿಯಿಂದ ನಿವೇಶನ ಸ್ವತ್ಛಗೊಳಿಸಿ ಅದರ ಮೊತ್ತವನ್ನು ಮನೆ ನೋಂದಾಣಿಗೆ ಬಂದಾಗ ಮಾಲೀಕರಿಂದ ದುಪ್ಪಟ್ಟು ತೆರಿಗೆ ವಸೂಲಿ ಮಾಡಿ ಎಂದು ಪುರಸಭೆ ಆರೋಗ್ಯಾಧಿಕಾರಿಗೆ ಅಧ್ಯಕ್ಷರು ಸೂಚಿಸಿದರು.
ಸುಜಲಾನ್ ಸೇರಿದಂತೆ ವಿವಿಧ ಕಂಪನಿಗಳಿಂದ ಆಗಮಿಸಿರುವ ಹೊರ ರಾಜ್ಯದ ವಾನಹಗಳ ಹಾವಳಿಯಿಂದ ಸುತ್ತಮುತ್ತಲಿನ ಮನೆಗಳ ಮಾಲೀಕರಿಗೆ ಕಿರಿಕಿರಿ ಉಂಟಾಗುತ್ತಿದೆ. ವೇಗದ ಮಿತಿ ಮೀರಿ ಚಾಲನೆ ಮಾಡುವುದರಿಂದ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸುವಂತಿಲ್ಲ. ಹಾಗೆಯೇ ಹೆಚ್ಚಿನ ಬಾಡಿಗೆ ಆಸೆಯಿಂದ ಮನೆಗಳನ್ನು ಹಾಸ್ಟೆಲ್‌ಗಳಿಗೆ ಬಾಡಿಗೆ ನೀಡುತ್ತಿರುವುದರಿಂದ ಅನ್ನ, ಸಂಬಾರು ಚರಂಡಿಗೆ ಹಾಕುತ್ತಾರೆ.
ಇದರಿಂದ ಹಂದಿ, ನಾಯಿ ಕಿರುಕುಳ ಮತ್ತು ಕೆಟ್ಟ ವಾಸನೆಯಿಂದ ವಾಸಿಸುವುದು ದುಸ್ತರವಾಗಿದೆ. ಹಾಗಾಗಿ ಇದಕ್ಕೂ ಕಡಿವಾಣ ಹಾಕಿ ಎಂದು ನಿವಾಸಿಗಳು ಮನವಿ ಮಾಡಿದರು. ಕಸಾಪ ಅಧ್ಯಕ್ಷ ಡಿ. ರಾಮನಮಲಿ, ಸರ್ ಖವಾಸ್, ಎ. ಮೂಸಾಸಾಬ್, ಭಧಿದ್ರಸ್ವಾಮಿ, ಡಿ.ಬಿ. ಬಡಿಗೇರ್, ಎಸ್. ಜಾಕೀರಹುಸೇನ್, ಪರುಶುರಾಮ, ಆರೋಗ್ಯಾಧಿಕಾರಿ ದೇವರಾಜ್ ಇತರರು ಇದ್ದರು.