Advertisement

ಸ್ವಚ್ಛತೆಗೆ ರಜೆ ಮೀಸಲಿಟ್ಟ ನಗರಸಭೆ

05:23 PM Jul 25, 2022 | Team Udayavani |

ರಬಕವಿ-ಬನಹಟ್ಟಿ: ಸರ್ಕಾರಿ ರಜೆಗಳಾದ ತಿಂಗಳ ಎರಡನೇ, ನಾಲ್ಕನೇ ಶನಿವಾರ ಹಾಗೂ ರವಿವಾರದಂದು ರಬಕವಿ-ಬನಹಟ್ಟಿ ನಗರಸಭೆ ನಗರ ಸ್ವಚ್ಛತೆಗೆ ಹೊಸ ಪರಿಕಲ್ಪನೆಯೊಂದಿಗೆ ಮುಂದಾಗಿದೆ.

Advertisement

ರಬಕವಿ-ಬನಹಟ್ಟಿ ನಗರಸಭೆಯ ವಾರ್ಡ್‌ ನಂ.3 ರಲ್ಲಿ ನಗರ ಸ್ವಚ್ಛತೆಯ ಹೊಸ ಪರಿಕಲ್ಪನೆಗೆ ಚಾಲನೆ ನೀಡಿ ಮಾತನಾಡಿದ ಪೌರಾಯುಕ್ತ ಅಶೋಕ ಗುಡಿಮನಿ, ಸ್ವಚ್ಛತೆ ಮಾಡೋದು ಕೇವಲ ಪೌರಕಾರ್ಮಿಕರ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೀಮಿತವಲ್ಲ. ಸ್ವಚ್ಛತೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಪ್ರತಿಯೊಬ್ಬರಿಗೂ ಸ್ವಚ್ಛತೆ ಅರಿವು ಬಂದಾಗಲೇ ಸ್ವಚ್ಛ ಭಾರತ ಅಭಿಯಾನ ಸಫಲವಾಗುವುದು. ಸ್ವಚ್ಛತೆ ನಡೆಗೆ ಒಂದು ದೃಢ ಹೆಜ್ಜೆ ಇಡೋಣ ಎಂದರು.

ನಗರದಲ್ಲಿ ಹಸಿಕಸ ಮತ್ತು ಒಣಕಸದ ಬಗ್ಗೆ ಜನರಿಗೆ ತಿಳಿವಳಿಕೆಯಿದೆ. ಆದರೆ, ಇದನ್ನು ಬೇರ್ಪಡಿಸಿ ಹಾಕುವುದಕ್ಕೆ ಮನೆ-ಮನೆಗೆ ತೆರಳಿ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದರು.

ಪ್ರತಿ ವಾರ್ಡ್‌ಗಳ ಸದಸ್ಯರು ತಮ್ಮ ವಾರ್ಡ್‌ಗಳನ್ನು ದತ್ತು ತೆಗೆದುಕೊಳ್ಳುವ ಮುಖಾಂತರ ಸ್ವಚ್ಛತೆ ಮತ್ತು ಕಸ ವಿಂಗಡಣೆ ಬಗ್ಗೆ ನಗರಸಭೆ ಸಿಬ್ಬಂದಿಗೆ ಕೈ ಜೋಡಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.

ಇದೀಗ ತಿಂಗಳ ನಾಲ್ಕು ದಿನಗಳ ಸರ್ಕಾರಿ ರಜೆಗಳಲ್ಲಿ ನಗರ ಸ್ವಚ್ಛತೆಗೆ ಎಲ್ಲ 31 ವಾರ್ಡ್‌ ಗಳಲ್ಲಿ 122 ಸಿಬ್ಬಂದಿ, 3 ಆರೋಗ್ಯ ಅಧಿಕಾರಿಗಳು ಹಾಗೂ 3 ಮೇಲ್ವಿಚಾರಕರ ತಂಡವಾಗಿ ನಿರಂತರ ಕಾರ್ಯ ನಡೆಯಲಿದೆ ಎಂದರು.

Advertisement

ನಗರಸಭೆಯ 125 ಎಲ್ಲ ವರ್ಗದ ಕಾರ್ಮಿಕರನ್ನು ಒಂದೆಡೆ ಬಳಕೆ ಮಾಡಿಕೊಂಡು 31 ವಾರ್ಡ್‌ಗಳನ್ನು ಸ್ವಚ್ಛತೆಯ ಪರಿಕಲ್ಪನೆಯೊಂದಿಗೆ ಶನಿವಾರ ಸ್ವಚ್ಛತೆಗೆ ಚಾಲನೆ ನೀಡಿದೆ. ಜನರ ಸಹಕಾರದಿಂದ ನಿರ್ಮಲ ನಗರವನ್ನಾಗಿಸುವ ಗುರಿಯಿದೆ. –ಅಶೋಕ ಗುಡಿಮನಿ, ಪೌರಾಯುಕ್ತ, ನಗರಸಭೆ

ಸ್ವಚ್ಛತೆಗೆ ಒಂದೇ ಸೂರಿನಲ್ಲಿ ನೂರಕ್ಕೂ ಅಧಿಕ ಸಿಬ್ಬಂದಿ ರಜೆ ದಿನಗಳನ್ನು ಮೀಸಲಿರಿಸಿದ್ದು ಖುಷಿ ತಂದಿದ್ದು, ಇವರೊಂದಿಗೆ ನಗರಸಭೆ ಸರ್ವ ಸದಸ್ಯರೂ ಬೆಂಬಲವಿದೆ. -ಸಂಜಯ ತೆಗ್ಗಿ, ಅಧ್ಯಕ್ಷ, ನಗರಸಭೆ, ರಬಕವಿ-ಬನಹಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next