Advertisement

ಪಾಲಿಕೆಯ 48 ವಾರ್ಡ್‌ಗಳಲ್ಲಿ ಬಿಜೆಪಿ ಲೀಡ್‌

01:23 PM May 27, 2019 | keerthan |

ಮಹಾನಗರ: ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಹಂಚಿಕೊಂಡಿರುವ ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ ಗಳ ಪೈಕಿ 48 ವಾರ್ಡ್‌ಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ಗಿಂತ ಅಧಿಕ ಮತಗಳನ್ನು ಪಡೆದುಕೊಂಡು ತನ್ನ ಪ್ರಾಬಲ್ಯವನ್ನು ಮೆರೆದಿದೆ. ಇದು, ಕೆಲವೇ ತಿಂಗಳಲ್ಲಿ ನಡೆಯಲಿರುವ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿಗೆ ಹೆಚ್ಚಿನ ಆತ್ಮಬಲವನ್ನು ತಂದು ಕೊಟ್ಟರೆ, ಕಾಂಗ್ರೆಸ್‌ ಪಾಳಯದಲ್ಲಿ ಮಾತ್ರ ಆತಂಕ ಮೂಡಿಸಿದೆ.

Advertisement

ಪಾಲಿಕೆಯ 38 ವಾರ್ಡ್‌ ಮಂಗಳೂರು ದಕ್ಷಿಣ ಕ್ಷೇತ್ರ ಮತ್ತು 22 ವಾರ್ಡ್‌ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 40 ವಾರ್ಡ್‌ ಗಳಲ್ಲಿ ಬಿಜೆಪಿ ಲೀಡ್‌ ಸಾಧಿಸಿದ್ದು, ಎರಡು ಕ್ಷೇತ್ರದಲ್ಲಿ ಬಿಜೆಪಿ ಭಾರಿ ಬಹುಮತದಿಂದ ಚುನಾಯಿತರಾಗಿದ್ದರು. ಈಗ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಪ್ರಾಬಲ್ಯ ಇದೇ ರೀತಿಯಲ್ಲಿ ಮುಂದುವರಿದಿರುವುದು ವಿಶೇಷ.

19 ವಾರ್ಡ್‌ಗಳಲ್ಲಿ ಬಿಜೆಪಿ ಮುನ್ನಡೆ
ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ 38 ವಾರ್ಡ್‌ಗಳ ಪೈಕಿ 29 ವಾರ್ಡ್‌ಗಳಲ್ಲಿ ಬಿಜೆಪಿ ಲೀಡ್‌ ಸಾಧಿಸಿದ್ದರೆ, ಮಂಗಳೂರು ಉತ್ತರ ಕ್ಷೇತ್ರದ 22 ವಾರ್ಡ್‌ಗಳ ಪೈಕಿ 19 ವಾರ್ಡ್‌ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮನಪಾ ವ್ಯಾಪ್ತಿಯಲ್ಲಿರುವ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ 32,835 ಮತಗಳ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಲಿದೆ.

1984ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ಬಳಿಕ ಒಂದು ಅವಧಿ ಹೊರತುಪಡಿಸಿ ಉಳಿದ ಎಲ್ಲ ಅವಧಿಯಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 2007ರಲ್ಲಿ ಪ್ರಥಮವಾಗಿ 35 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಪಡೆದಿತ್ತು. ಕಾಂಗ್ರೆಸ್‌ ಸದಸ್ಯ ಬಲ 20ಕ್ಕೆ ಇಳಿದಿತ್ತು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ 35 ಸ್ಥಾನ ಗೆದ್ದು ಮತ್ತೆ ಅಧಿಕಾರ ಪಡೆದಿತ್ತು. 20 ಸ್ಥಾನ ಬಿಜೆಪಿ ಪಾಲಾಗಿದ್ದರೆ, ಉಳಿದ 5 ಸ್ಥಾನ ಹಾಗೂ ಪಕ್ಷೇತರ, ಇತರ ಪಕ್ಷದವರ ಪಾಲಾಗಿತ್ತು.

ಪಾಲಿಕೆಯ ವಾರ್ಡ್‌ಗಳ ಮೀಸಲು ವಿಷಯ ಈಗ ನ್ಯಾಯಾಲಯದ ಮುಂದಿದ್ದು, ಶೀಘ್ರ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಈ ಹಿಂದೆ ಸರಕಾರ ಪ್ರಕಟಿಸಿದ ಮೀಸಲಾತಿಯಲ್ಲಿ ತಾರತಮ್ಯ ಮಾಡಲಾಗಿದೆ. ಕಾಂಗ್ರೆಸ್‌ ಕಾರ್ಪೋರೇಟರ್‌ಗಳು ಇರುವ ವಾರ್ಡ್‌ನ ಮೀಸಲು ಬದಲಾವಣೆ ಮಾಡಿಲ್ಲ ಎಂದು ಆರೋಪಿಸಿ ಬಿಜೆಪಿ ಬೆಂಬಲಿಗರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ತೀರ್ಪು ಬಳಿಕ ಯಾವ ವಾರ್ಡ್‌ಗೆ ಯಾವ ಮೀಸಲಾತಿ ಬರಲಿದೆ ಎಂದು ಕುತೂಹಲ ಸೃಷ್ಟಿಯಾಗಿದೆ.

Advertisement

ಯಾರಿಗೆ ಲಾಭ? ನಷ್ಟ?
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದರೂ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಉಸ್ತುವಾರಿ ಸಚಿವರಿದ್ದಾರೆ. ಜತೆಗೆ ಕಾಂಗ್ರೆಸ್‌ ಆಡಳಿತದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ವರದಾನವಾಗಲಿದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ. ಆದರೆ, ಪಾಲಿಕೆ ವ್ಯಾಪ್ತಿಯ ಎರಡು ವಿ.ಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವ ಕಾರಣದಿಂದ ಹಾಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಾಸ್ತಿ ಲೀಡ್‌ ದೊರಕಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಲಾಭ ಎಂಬುದು ಬಿಜೆಪಿ ಲೆಕ್ಕಾಚಾರ. ಹೀಗಾಗಿ ಈ ಬಾರಿಯ ಮನಪಾ ಚುನಾವಣೆ ಮೇಲೆ ಈ ಫಲಿತಾಂಶವು ಯಾವ ರೀತಿಯಲ್ಲಿ ಪರಿಣಾಮ ಬೀಳಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next