Advertisement

ಅಭಿವೃದ್ಧಿ ಪರ್ವ ಮುಂದುವರಿಯಬೇಕಾದ್ರೆ ಕಾಂಗ್ರೆಸ್‌ ಗೆಲ್ಲಿಸಿ

12:51 PM Apr 05, 2017 | |

ಮೈಸೂರು: ಡಾ. ಎಚ್‌.ಸಿ.ಮಹದೇವಪ್ಪ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ನಂಜನಗೂಡಿನಲ್ಲಿ ಆರಂಭಿಸಿರುವ ಅಭಿವೃದ್ಧಿ ಪರ್ವ ಮುಂದುವರಿಯಬೇಕಾದರೆ ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹುಲ್ಲಹಳ್ಳಿಯಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಹಿಂದಿನ ಶಾಸಕರು ಸ್ವಪತ್ರಿಷ್ಠೆಗಾಗಿ ರಾಜೀನಾಮೆ ಕೊಟ್ಟಿದ್ದ ರಿಂದ, ಬೇಸಿಗೆಯ ಈ ಬರಗಾಲದಲ್ಲಿ ಅನಗತ್ಯ ವಾಗಿ ಈ ಉಪ ಚುನಾವಣೆ ಬಂದಿದೆ ಎಂದರು.

Advertisement

ರಾಜಕೀಯ ಪಕ್ಷವಾಗಿ ನಾವು ಕೂಡ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. 35 ವರ್ಷಗಳಿಂದ ಕಳಲೆ ಕೇಶವ ಮೂರ್ತಿ ನನಗೆ ಪರಿಚಯದ ವ್ಯಕ್ತಿ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲೂ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋತಿದ್ದಾರೆ. ಇದೇ ಕ್ಷೇತ್ರದವರು, ಯಾವಾಗ ಬೇಕಾದರೂ ನಿಮ್ಮ ಕೈಗೆ ಸಿಗುತ್ತಾರೆ. ಸರಳ, ಸಜ್ಜನಿಕೆಯ, ಹಮ್ಮುಬಿಮ್ಮು ಇಲ್ಲದ, ಶುದ್ಧ ಹಸ್ತದ ವ್ಯಕ್ತಿ. ಮದುವೆಯೂ ಆಗದೆ ಸಾರ್ವಜನಿಕ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ತಿಳಿಸಿದರು.

ವಿರೋಧಪಕ್ಷದವರು ನಮ್ಮ ಬಗ್ಗೆ ಏಕವಚನ ದಿಂದ ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದಾರೆ. ನಾವು ಅವರಂತೆ ಬಯ್ಯಲ್ಲ, ಅವಾಚ್ಯ ಶಬ್ದ, ಏಕವಚನದಿಂದ ಮಾತಾಡಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ. ಕಾಂಗ್ರೆಸ್‌ ಪಕ್ಷದ ತತ್ವ-ಸಿದ್ಧಾಂತ, ನಮ್ಮ ಸರ್ಕಾರ ಮಾಡಿರುವ ಕೆಲಸ ಗಳನ್ನಷ್ಟೆ ಪ್ರಸ್ತಾಪ ಮಾಡುತ್ತೇವೆ. ತೀರ್ಮಾನ ಮಾಡುವವರು ನೀವು. ಒಳ್ಳೆಯ ತೀರ್ಮಾನ ಮಾಡುತ್ತೀರಿ ಎಂಬ ವಿಶ್ವಾಸವಿದೆ ಎಂದರು.

ನಂಜನಗೂಡು, ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲೂ ನಮ್ಮ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಜನರ ಸ್ಪಂದನ, ಒಲವು ನೋಡಿದಾಗ, ನಂಜನಗೂಡು ಕ್ಷೇತ್ರದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಹಾಗೂ ಗುಂಡ್ಲುಪೇಟೆ ಕ್ಷೇತ್ರದ ಅಭ್ಯರ್ಥಿ ಗೀತಾ ಮಹದೇವಪ್ರಸಾದ್‌ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಬಂದಿದೆ ಎಂದರು.

ಮುಖ್ಯಮಂತ್ರಿ ಸ್ಥಾನ ಹೋಗುತ್ತೆ ಎಂದು ಮೂಢನಂಬಿಕೆಗೆ ಕಟ್ಟುಬಿದ್ದು ಚಾಮರಾಜನಗರಕ್ಕೆ ಹೋಗದ ಯಡಿಯೂರಪ್ಪನ ರೀತಿ ನಾವು ಭವಿಷ್ಯ ಹೇಳಲ್ಲ. ಎರಡು ವರ್ಷದ ಹಿಂದೆ ನನ್ನ ಕಾರಿನ ಮೇಲೆ ರೋಗದ ಕಾಗೆ ಕೂತಿದ್ದನ್ನೆ ದೊಡ್ಡದು ಮಾಡಿ, ಕಾಗೆ ಕೂತಿದ್ದರಿಂದ ಸಿದ್ದರಾಮಯ್ಯ ಮುಂದಿನ ಬಜೆಟ್‌ ಮಂಡಿಸಲ್ಲ ಎಂದಿದ್ದರು. ಕಾರು ಹಳೆಯದಾಗಿತ್ತು ಬದಲಾಯಿಸಿದೆ. ನನಗೆ ಇಂಥದ್ದರ ಲ್ಲೆಲ್ಲಾ ನಂಬಿಕೆ ಇಲ್ಲ. ಇನ್ನೂ ಒಂದು ಬಜೆಟ್‌ ನಾನೇ ಮಂಡಿಸುತ್ತೇನೆ ಎಂದು ಹೇಳಿದರು.

Advertisement

ಉತ್ತರ ಪ್ರದೇಶದಲ್ಲಿ ಗೆದ್ದಿದ್ದೇವೆ ಎಂದು ಬೀಗಲು ಹೋಗಬೇಡಿ. ಇದು ಉತ್ತರಪ್ರದೇಶವಲ್ಲ ಕರ್ನಾಟಕ. ನರೇಂದ್ರಮೋದಿ ಅವರ ಗಾಳಿ ಉತ್ತರ ಪ್ರದೇಶಕ್ಕೆ ಸೀಮಿತವಾಗಿದ್ದೇಕೆ, ಪಂಜಾಬ್‌ನಲ್ಲೇಕೆ ಮೋದಿ ಗಾಳಿ ಬೀಸಲಿಲ್ಲ. ಕರ್ನಾಟಕದ ಜನ ಜಾತ್ಯತೀತವಾಗಿ, ಸೌಹಾರ್ದಯುತವಾಗಿ ಒಂದು ತಾಯಿಯ ಮಕ್ಕಳಂತೆ ಇದ್ದಾರೆ, ಜಾತಿ- ಧರ್ಮದ ಮೇಲೆ ಇಲ್ಲಿನ ಜನ ಮತ ನೀಡಲ್ಲ ಎಂದರು.

ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದು ಎನ್ನುತ್ತಾರೆ ಯಡಿಯೂರಪ್ಪ. ಹೌದು, ಕೇಂದ್ರದಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರ ಇದ್ದಾಗ ಆಹಾರ ಭದ್ರತಾ ಕಾಯ್ದೆತಂದಿದೆ. ಜನರಿಗೆ ತಪ್ಪು ಮಾಹಿತಿ ಕೊಡಬೇಡಿ, ಜನರು ಪೆದರಲ್ಲ, ನಿಮ್ಮ ಸುಳ್ಳುಗಳನ್ನು ನಂಬಲು ಎಂದು ಹರಿಹಾಯ್ದರು.

ಬಿಜೆಪಿ ನಾಯಕರುಗಳು ಬುರುಡೆ ದಾಸರಂತೆ ಬುರುಡೆ ಹೊಡೆಯುತ್ತಾರೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎನ್ನುತ್ತಾರೆ. ಇದೇ ಯಡಿಯೂರಪ್ಪ2010ರಲ್ಲಿ ಮುಖ್ಯಮಂತ್ರಿ ಯಾಗಿದ್ದಾಗ ರೈತರ ಸಾಲಮನ್ನಾ ಮಾಡಲು ದುಡ್ಡು ಪ್ರಿಂಟ್‌ ಮಾಡುವ ಮಿಷನ್‌ ಇಟ್ಟು ಕೊಂಡಿಲ್ಲ ಎಂದಿದ್ದರು. ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಕೂಡ ಸ್ಪಂದಿಸುತ್ತಿಲ್ಲ. ಪ್ರಧಾನಿ ಮೋದಿ ಬಳಿಗೆ ನಿಯೋಗ ಕರೆದೊಯ್ದಾಗ ಬಿಜೆಪಿಯ ಸಂಸದರು, ರೈತರ ಸಾಲಮನ್ನಾ ಮಾಡುವಂತೆ ಬಾಯಿ ಬಿಡಲಿಲ್ಲ. ಇಲ್ಲಿ ಬಂದು ಬುರುಡೆ ಹೊಡೆಯು ತ್ತಾರೆ ಎಂದು ಜರಿದರು.

ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಕಾಂಗ್ರೆಸ್‌ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವೆ ಮೋಟಮ್ಮ, ರಿಜಾÌನ್‌ ಅರ್ಷದ್‌, ಸಲೀಂ ಅಹಮದ್‌, ಅಭ್ಯರ್ಥಿ ಕಳಲೆ ಕೇಶವಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.

ನೀವಿದ್ದಾಗ ಸರ್ಕಾರ ಹೇಗಿತ್ತು ಹಿಂತಿರುಗಿ ನೋಡಿಕೊಳ್ಳಿ
ಮೈಸೂರು:
ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಂತಹ ಸರ್ಕಾರ ಇತ್ತು ಎಂಬುದನ್ನು ಎಸ್‌.ಎಂ.ಕೃಷ್ಣ ಅವರು ಒಮ್ಮೆ ಹಿಂತಿರುಗಿ ನೋಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌.ಎಂ.ಕೃಷ್ಣ ಅವರು ಹಿರಿಯ ನಾಯಕರಾಗಿದ್ದು, ಅವರ ದೂರಾಲೋಚನೆ ಬಗ್ಗೆ ತಮ್ಮ ಯಾವುದೇ ತಕರಾರಿಲ್ಲ. ಆದರೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ 30 ಮಂತ್ರಿಗಳು ಚುನಾವಣೆಯಲ್ಲಿ ಸೋತ ಪರಿಣಾಮ ಕಾಂಗ್ರೆಸ್‌ ಶಾಸಕರ ಸಂಖ್ಯೆಯಲ್ಲಿ ಬಾರೀ ಇಳಿಕೆ ಉಂಟಾಯಿತು.

ಹೀಗಾಗಿ ಕೃಷ್ಣ ಅವರು ತಮ್ಮ ಅವಧಿಯಲ್ಲಿ ಎಂತಹ ದೂರಾಲೋಚನೆಯ ಮತ್ತು ಒಳ್ಳೆಯ ಸರ್ಕಾರವಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದು  55 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ,  ಈ ಸರ್ಕಾರಕ್ಕೆ ದೂರಾಲೋಚನೆಯೇ ಇಲ್ಲ ಎಂಬ ಎಸ್‌.ಎಂ.ಕೃಷ್ಣ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next