ಮುಂಡರಗಿ: ಪಟ್ಟಣದ ಅಂಭಾಭವಾನಿ ನಗರದ ಅಲಂಕಾರ ಲಾಡ್ಜ್ ಹಿಂದಿರುವ ಕಂಟೈನ್ಮೆಂಟ್ ಏರಿಯಾದ ಬಗರೇ ದಂತ ಚಿಕಿತ್ಸಾಲಯದಲ್ಲಿ ಶುಕ್ರವಾರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ಜೆ.ವಿ. ಜಕ್ಕನಗೌಡರ ಭೇಟಿ ನೀಡಿ ಚಿಕಿತ್ಸೆ ನೀಡದಂತೆ ವೈದ್ಯರಿಗೆ ಎಚ್ಚರಿಕೆ ನೀಡಿದರು. ಅಲ್ಲದೇ ವೈದ್ಯರು ಮತ್ತು ಸಿಬ್ಬಂದಿಗೆ ಕ್ವಾರಂಟೈನ್ ಮಾಡಲು ಸೂಚನೆ ನೀಡಿದರು.
ಈ ವೇಳೆ ತಹಶೀಲ್ದಾರ್ ಜೆ.ವಿ. ಜಕ್ಕನಗೌಡ್ರ ವೈದ್ಯರನ್ನು ಕರೆಯಿಸಿ, ಕಂಟೇನ್ಮೆಂಟ್ ಏರಿಯಾದಲ್ಲಿ ಚಿಕಿತ್ಸೆ ನೀಡುತ್ತಿರುವುದು ಸರಿಯಲ್ಲ. ಕೋವಿಡ್ ವೈರಾಣು ಹಬ್ಬುತ್ತಿರುವುದು ಗೊತ್ತಿದ್ದು, ಚಿಕಿತ್ಸೆ ನೀಡುತ್ತಿದ್ದೀರಿ. ನಿಮ್ಮ ಆಸ್ಪತ್ರೆಗೆ ಬಂದ ರೋಗಿಗಳಿಗೆ ಕೋವಿಡ್ ದೃಢಪಟ್ಟರೆ ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ದಂತ ವೈದ್ಯರಿಗೆ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಡಾ| ಬಸವರಾಜ ಕೆ. ಮತ್ತು ಸಿಬ್ಬಂದಿ ವೈದ್ಯ ಹಾಗೂ ಸಿಬ್ಬಂದಿಯ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಿದರು. ಅಲ್ಲದೇ ವೈದ್ಯರು, ಸಿಬ್ಬಂದಿಯನ್ನು ಕಾರಂಟೈನ್‌ನಲ್ಲಿ ಇಡಲಾಗುತ್ತದೆ. ಚಿಕಿತ್ಸೆಗೆ ಬಂದಿದ್ದ ಹದಿನೈದು ಜನರ ಸಂಪರ್ಕ ಸಂಖ್ಯೆ ಮತ್ತು ವಿಳಾಸ ಪಡೆದುಕೊಂಡು ಮನೆಗೆ ಕಳುಹಿಸಿ ಕೊಡಲಾಗುತ್ತದೆ. ಈ ಪ್ರದೇಶವನ್ನು 21 ದಿನಗಳ ಕಾಲ ಕಂಟೇನ್ಮೆಂಟ್ ಮಾಡಲಾಗಿರುತ್ತದೆ ಎಂದು ಹೇಳಿದರು.
ಮಾಸ್ಕ್ ಕಡ್ಡಾಯಕ್ಕೆ ಸೂಚನೆ: ಸಾರ್ವಜನಿಕವಾಗಿ ಓಡಾಡುವ ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್. ಎಸ್. ನಾಯಕ ಅವರಿಗೆ ತಹಶೀಲ್ದಾರ್ ಜೆ.ವಿ. ಜಕ್ಕನಗೌಡ್ರ ಸೂಚನೆ ನೀಡಿದರು. ತಹಶೀಲ್ದಾರ್ ಜೆ.ವಿ. ಜಕ್ಕನಗೌಡರ, ಸಿಪಿಐ ಸುಧೀರಕುಮಾರ ಬೆಂಕಿ, ಮುಖ್ಯಾಧಿಕಾರಿ ಎಚ್.ಎಸ್. ನಾಯಕ, ಪಿಎಸ್‌ಐ ಚಂದ್ರಪ್ಪ ಈಟಿ ಸೇರಿದಂತೆ ಇತರರಿದ್ದರು.