Advertisement

ಮುಂಡಾಜೆ ಕಾಪು ಚಡಾವಿನಲ್ಲಿ ನದಿಗೆ ಉರುಳಿದ ರಿಕ್ಷಾ: ಮಹಿಳೆ ಸ್ಥಳದಲ್ಲೇ ಸಾವು

09:23 PM Feb 04, 2023 | |

ಬೆಳ್ತಂಗಡಿ: ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಮುಂಡಾಜೆ ಕಾಪು ಚಡಾವಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತರು ಕಕ್ಕಿಂಜೆ ಸನಿಹದ ಚಿಬಿದ್ರೆ ಕತ್ತರಿಗುಡ್ಡೆ ನಿವಾಸಿ, ದಿ.ಆಲಿಕುಂಞಿ ಅವರ ಪುತ್ರಿ ಸೆಫಿಯಾ (57) ಎಂಬುವರಾಗಿದ್ದಾರೆ.

Advertisement

ಸಹಸವಾರರಾಗಿದ್ದ ಕಡಿರುದ್ಯಾವರ ಗ್ರಾಮದ ಕುಕ್ಕಾವು ನಿವಾಸಿ ಮರಿಯಮ್ಮ (23), ಭದ್ರಾವತಿಯ ಮುಹಮ್ಮದ್‌ ಅಶ್ರಫ್‌(35) ರಿûಾ ಚಾಲಕ ಅಬೂಬಕ್ಕರ್‌ ಸಿದ್ದೀಕ್‌(21) ಅವರು ಗಾಯಕ್ಕೊಳಗಾಗಿದ್ದಾರೆ.

ಕಾಜೂರಿನಲ್ಲಿ ನಡೆಯುತ್ತಿದ್ದ ಉರೂಸ್‌ ಕಾರ್ಯಕ್ರಮಕ್ಕೆ ತೆರಳಿದ್ದ ಅವರು ಬಾಡಿಗೆ ರಿಕ್ಷಾದಲ್ಲಿ ರಾತ್ರಿ ಮನೆ ಕಡೆಗೆ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ರಿಕ್ಷಾ ಯಾವುದೇ ತಡೆ ಬೇಲಿ ಇಲ್ಲದ ಕಾಪು ಚಡಾಬಿನಿಂದ ಮೃತ್ಯುಂಜಯ ನದಿಗೆ ಉರುಳಿಬಿದ್ದಿದೆ. ಈ ವೇಳೆ ಆಟೋದಲ್ಲಿದ್ದ ಇತರರು ಹೊರಗೆಸೆಯಲ್ಪಟ್ಟಿದ್ದರೆ, ಮೃತ ಸೆಫಿಯಾ ಅವರು ರಿಕ್ಷಾ ಸಮೇತ ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಅಪಘಾತ ನಡೆದ ಮಾಹಿತಿ ಅರಿತ ಶಂಶು ಗಾಂಧಿನಗರ ಮತ್ತು ಶಿರಾಜ್‌ ಚಿಬಿದ್ರೆ ಅವರು ಇರುಳಲ್ಲೂ ಕೂಡ ಭಾರೀ ಪ್ರಪಾತಕ್ಕೆ ಇಳಿದು ಗಾಯಾಳುಗಳನ್ನು ಮತ್ತು ಮೃತದೇಹವನ್ನು ಮೇಲೆತ್ತುವ ಕಾರ್ಯ ನಡೆಸಿದ್ದು, ಅವರಿಗೆ ಎಸ್‌ಕೆಎಸ್ಸೆಸ್ಸೆಫ್‌ ವಿಕಾಯ ಕಾರ್ಯಕರ್ತರು ಮತ್ತು ಸ್ಥಳೀಯರು ಸಹಕಾರ ನೀಡಿದ್ದರು. ಚಾಲಕನ ಅಜಾಗರೂಕತೆಯ ಚಾಲನೆಯೇ ಅವಘಡಕ್ಕೆ ಕಾರಣ ಎಂದು ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಸೆಫಿಯಾ ಅವರು ಪತ್ರಕರ್ತ ಅಶ್ರಫ್‌ ಆಲಿಕುಂಞಿ ಮುಂಡಾಜೆ ಅವರ ಸಹೋದರಿಯಾಗಿದ್ದು, ಘಟನೆಯ ವಿವರ ಅರಿಯುತ್ತಿದ್ದಂತೆ ಶಾಸಕ ಹರೀಶ್‌ ಪೂಂಜ ಸಂಪರ್ಕಿಸಿ ಸಾಂತ್ವಾನ ಹೇಳಿದರೆ, ಮಾಜಿ ಶಾಸಕ ಕೆ.ವಸಂತ ಬಂಗೇರ ಮತ್ತು ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್‌ ಶಿವರಾಂ ಆಸ್ಪತ್ರೆಗೆ ಭೇಟಿ ನೀಡಿದರು. ಕಾರ್ಯಾಚರಣೆ ಯಲ್ಲಿ ಅಕºರ್‌ ಬೆಳ್ತಂಗಡಿ, ಜಲೀಲ್‌ ಬಾಬಾ, ಝುಬೈರ್‌ ಕಕ್ಕಿಂಜೆ ಮತ್ತು ತಂಡದವರು ಸಹಕಾರಿಯಾದರು.

Advertisement

ಮೃತರು ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಅಪಘಾತ ನಡೆದ ಜಾಗದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ಇಂತಹದ್ದೇ ಘಟನೆಗಳು ನಡೆದಿದ್ದು, ಶಾಸಕ ಹರೀಶ್‌ ಪೂಂಜ ಅವರ ಸೂಚನೆಯ ಮೇರೆಗೆ ಘಟನಾ ಸ್ಥಳದಲ್ಲಿ ಶನಿವಾರವೇ ಮಣ್ಣಿನ ದಿಣ್ಣೆಗಳನ್ನು ರಚಿಸುವಂತೆ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಪಠಾಣ್ ನಿಜವಾದ ಕಲೆಕ್ಷನ್ ಎಷ್ಟು?; ನೆಟಿಜನ್ ಗಳಿಗೆ ತಿರುಗೇಟು ಕೊಟ್ಟ ಶಾರುಖ್

Advertisement

Udayavani is now on Telegram. Click here to join our channel and stay updated with the latest news.

Next