Advertisement

Mumtaz Ali Missing: Moideen ಬಾವಾ ಸೋದರ ಮಮ್ತಾಜ್‌ ಆಲಿ ಆತ್ಮಹ*ತ್ಯೆ?

10:27 AM Oct 07, 2024 | Team Udayavani |

ಪಣಂಬೂರು/ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ Moideen ಬಾವಾ ಅವರ ಸೋದರ, ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳ ಚೆಯರ್‌ಮನ್‌ ಮಮ್ತಾಜ್‌ ಆಲಿ (52) ನಾಪತ್ತೆಯಾಗಿದ್ದಾರೆ. ಅವರ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರು ರವಿವಾರ ಮುಂಜಾನೆ ಕೂಳೂರು ಸೇತುವೆಯ ಬಳಿ ಅಪಘಾತಕ್ಕೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೊಬೈಲ್‌, ಕಾರಿನ ಕೀ ಅಲ್ಲಿಯೇ ಇದ್ದು ಆತ್ಮಹತ್ಯೆ ಮಾಡಿರುವ ಶಂಕೆ ಮೂಡಿದೆ.

Advertisement

ನದಿಗೆ ಹಾರಿದ್ದಾರೆಯೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ಸೇತುವೆ ಆಸುಪಾಸಿನಲ್ಲಿ ಮುಳುಗುತಜ್ಞ ಈಶ್ವರ ಮಲ್ಪೆ ಸಹಿತ 7 ಸ್ಕೂಬಾ ಡೈವರ್‌ಗಳು ಹುಡುಕಾಟ ನಡೆಸುತ್ತಿದ್ದಾರೆ. ಎನ್‌ಡಿಆರ್‌ಎಫ್‌ ತಂಡ ಕೂಡ ಶೋಧಕಾರ್ಯ ನಡೆಸುತ್ತಿದೆ. ರವಿವಾರ ತಡರಾತ್ರಿಯವರೆಗೂ ಯಾವುದೇ ಕುರುಹು ಪತ್ತೆಯಾಗಿಲ್ಲ.

ರವಿವಾರ ಮುಂಜಾನೆ 3ಕ್ಕೆ ನಗರದಿಂದ ಮನೆ ಬಿಟ್ಟು ತನ್ನ ಕಾರಿನಲ್ಲಿ ಸುರತ್ಕಲ್‌ ಕಡೆಗೆ ತೆರಳಿದ್ದರು. ಈ ಸಂದರ್ಭ ಎಂಸಿಎಫ್‌ ಕಾರ್ಖಾನೆ ಸನಿಹ ಕಾರು ಖಾಸಗಿ ಬಸ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಚಾಲಕ ಹಾಗೂ ನಿರ್ವಾಹಕರ ಬಳಿ ಅಪಘಾತವಾದ ಬಗ್ಗೆ ಕ್ಷಮೆ ಕೇಳಿದ ಬಳಿಕ ಪಣಂಬೂರು ವೃತ್ತದ ಬಳಿ ತಿರುಗಿ ಮರಳಿ ಕೂಳೂರು ಕಡೆ ಬಂದಿದ್ದರು ಎನ್ನಲಾಗಿದೆ.

ಕಾರಿನಲ್ಲಿ ಬರುವಾಗಲೇ ತನ್ನ ಪುತ್ರಿ ಹಾಗೂ ಗೆಳೆಯನೋರ್ವನಿಗೆ ನಾನು ಬದುಕುಳಿಯಲ್ಲ, ದೇವರ ಬಳಿಗೆ ಹೋಗುತ್ತಿದ್ದೇನೆ ಎಂದು ಬ್ಯಾರಿ ಭಾಷೆಯಲ್ಲಿ ವಾಯ್ಸ ಮೆಸೇಜ್‌ ಹಾಕಿದ್ದರು. 4.40ಕ್ಕೆ ಇದನ್ನು ನೋಡಿದ ತತ್‌ಕ್ಷಣ ಮನೆಮಂದಿ ಇನ್ನೊಂದು ಕಾರಿನಲ್ಲಿ ಹುಡುಕಾಟ ಆರಂಭಿಸಿದರು. ಆಲಿ ಅವರ ಸಹೋದರರು ಹಾಗೂ ಗೆಳೆಯರಿಗೂ ಸುದ್ದಿ ಮುಟ್ಟಿಸಿ ಕೂಳೂರು ಬಳಿ ಬಂದಾಗ ಕಾರು ಸೇತುವೆ ಬಳಿ ನಿಂತಿರುವುದು ಕಂಡು ಗಾಬರಿಗೊಂಡರು. ಕಾರಿನಲ್ಲಿ ಆಲಿ ಅವರು ಉಪಯೋಗಿಸುತ್ತಿದ್ದ ಎರಡೂ ಮೊಬೈಲ್‌ ಪತ್ತೆಯಾಗಿದೆ. ಸಹೋದರ, ಮಾಜಿ ಶಾಸಕ ಮೊದಿನ್‌ ಬಾವಾ ಬೆಳಗ್ಗಿನಿಂದಲೇ ಸ್ಥಳದಲ್ಲಿದ್ದರು.

7 ಸ್ಕೂಬಾ ಡೈವರ್‌ಗಳಿಂದ ಹುಡುಕಾಟ
ಜಿಲ್ಲಾಡಳಿತದ ಕರೆಯ ಮೇರೆಗೆ ಘಟನ ಸ್ಥಳಕ್ಕೆ ಆಗಮಿಸಿದ ಈಜು ತಜ್ಞ ಈಶ್ವರ ಮಲ್ಪೆ ತಂಡ ಆಳದವರೆಗೂ ಹುಡುಕಾಡಿದರೂ ಪತ್ತೆಯಾಗಿಲ್ಲ. ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕೆಳಗೆ ಕಬ್ಬಿಣದ ಸರಳು, ಸಿಮೆಂಟ್‌ ಚೀಲ ಗಳಿವೆ. ಇಲ್ಲಿ ಬಿದ್ದಿದ್ದರೆ ಇಲ್ಲೇ ಸಿಗಬೇಕು, ಇಷ್ಟು ಬೇಗ ಸಮುದ್ರ ಸೇರುವ ಅವಕಾಶವಿಲ್ಲ ಎಂದರು.

Advertisement

ವಿವಿಧ ಆಯಾಮಗಳಲ್ಲಿ ತನಿಖೆ
ಆಲಿ ಅವರು ನಾಪತ್ತೆಯಾಗುವ ಮುನ್ನ ವಾಯ್ಸ ಮೆಸೇಜ್‌ನಲ್ಲಿ ಮಾನಸಿಕವಾಗಿ ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನ ಹೆಸರು ಉಲ್ಲೇಖೀಸಿದ್ದಾರೆ ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.

ನಾಪತ್ತೆ ಪ್ರಕರಣ ದಾಖಲು
ಆಲಿ ನಾಪತ್ತೆಯಗಿರುವ ಬಗ್ಗೆ ಅವರ ಪುತ್ರಿ ನೀಡಿರುವ ದೂರಿನಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ಅವರ ಕಾರಿನ ಮುಂಭಾಗ ನಜ್ಜುಗುಜ್ಜಾಗಿತ್ತು. ಕಾರಿನಲ್ಲಿ ತಂದೆ ಇರಲಿಲ್ಲ. ಈ ಬಗ್ಗೆ ಹಲವಾರು ಅನುಮಾನ ಗಳಿವೆ’ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ನದಿಗೆ ಹಾರಿದ ಸಂಶಯ; ಕಮಿಷನರ್‌
ಕುಳೂರು ಸೇತುವೆ ಬಳಿಗೆ ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಆಗಮಿಸಿ, ಪೊಲೀಸರ ಶೋಧ ಕಾರ್ಯಕ್ಕೆ ಮಾರ್ಗದರ್ಶನ ನೀಡಿದರು. ಘಟನೆ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು ಮುಂಜಾನೆ 3ರ ವೇಳೆಗೆ ಮನೆಯಲ್ಲಿ ಕೆಲವು ಕಾರಣಗಳಿಂದ ಸಿಟ್ಟಾಗಿ ಕಾರು ಚಲಾಯಿಸುತ್ತಾ ಬಂದಿದ್ದರು. ಸೇತುವೆ ಯಿಂದ ಕೆಳಕ್ಕೆ ಹಾರಿರುವ ಬಗ್ಗೆ ಸಂಶಯ ಇದೆ.

ಎಫ್‌ಎಸ್‌ಎಲ್‌ ಅಧಿಕಾರಿಗಳು ಕಾರು ಪರಿಶೀಲನೆ ಮಾಡಿದ್ದಾರೆ. ಕುಟುಂಬದಿಂದ ಕೆಲವು ಮಾಹಿತಿ ಪಡೆದಿದ್ದೇವೆ ಎಂದರು. ಸ್ಥಳದಲ್ಲೇ ಇದ್ದ ಮೊದಿನ್‌ ಬಾವಾ ಕಣ್ಣೀರು ಹಾಕುತ್ತಾ ಕಮಿಷನರ್‌ಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌, ಎಂಎಲ್‌ಸಿ ಐವನ್‌ ಡಿ’ಸೋಜಾ, ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಸ್ಥಳಕ್ಕೆ ಭೇಟಿ ನೀಡಿದರು.

ನಿರಂತರ ಶೋಧ ನಡೆಸಿದರೂ ಸುಳಿವು ಸಿಕ್ಕಿಲ್ಲ
ಪಣಂಬೂರು/ಮಂಗಳೂರು: ಮಮ್ತಾಜ್‌ ಆಲಿ ಅವರ ನಾಪತ್ತೆ ಪ್ರಕರಣವನ್ನು ಭೇದಿಸಲು ರವಿವಾರ ರಾತ್ರಿಯವರೆಗೂ ಪೊಲೀಸರಿಗೆ ಸಾಧ್ಯವಾಗಿಲ್ಲ. ಕೂಳೂರು ಸೇತುವೆಯ ಮೇಲಿನಿಂದ ನದಿಗೆ ಹಾರಿರಬಹುದು ಎಂಬ ಶಂಕೆಯ ಆಧಾರದಲ್ಲಿ ನಿರಂತರ ಶೋಧ ನಡೆಸಿದರೂ ಸುಳಿವು ಸಿಕ್ಕಿಲ್ಲ. ಇದರಿಂದಾಗಿ ಪ್ರಕರಣ ನಿಗೂಢ ವಾಗಿಯೇ ಉಳಿದಿದೆ. ಇದರ ಜತೆಗೆ ಮಮ್ತಾಜ್‌ ಆಲಿಯವರು ಬ್ಲ್ಯಾಕ್‌ ಮೇಲ್‌ಗೆ ಒಳಗಾಗಿದ್ದರು, ಹನಿ ಟ್ರ್ಯಾಪ್‌ ಮಾಡಲಾಗಿತ್ತು ಎಂಬ ಶಂಕೆ ಕೂಡ ವ್ಯಕ್ತವಾಗಿದ್ದು ಪೊಲೀಸರು ಆ ದಿಕ್ಕಿನಿಂದಲೂ ತನಿಖೆ ಮುಂದುವರಿಸಿದ್ದಾರೆ.

ಮಹಿಳೆಯೋರ್ವಳು ಇತರ ಕೆಲವರ ಜತೆಗೆ ಸೇರಿ ಬ್ಲ್ಯಾಕ್‌ವೆುàಲ್‌ ಮಾಡಿದ್ದಳು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ನಿರಂತರ ಕಾರ್ಯಾಚರಣೆ
ಬೆಳಗ್ಗೆ 7.30ರಿಂದಲೇ ಶೋಧ ಕಾರ್ಯ ಆರಂಭವಾಗಿ ತಡರಾತ್ರಿವರೆಗೂ ಮುಂದುವರಿದಿತ್ತು. ಮಳೆ ಹಿನ್ನೆಲೆಯಲ್ಲಿ ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಕೂಳೂರು ಭಾಗದಿಂದ ಬೆಂಗ್ರೆ ಹಾಗೂ ಕುದ್ರುವರೆಗೆ ಕಾರ್ಯಾಚರಣೆ ನಡೆಸಿ ದರು. ಕೂಳೂರು ಸೇತುವೆ ಸಮೀಪದಲ್ಲಿ ಒಂದು ವೇಳೆ ಮೃತದೇಹ ಹೂಳಿನಲ್ಲಿ ಸಿಲುಕಿಕೊಂಡಿದ್ದರೆ ಅದು ಮೇಲಕ್ಕೆ ಬರುವುದಕ್ಕೂ ಪೂರಕವಾಗಿಯೂ ಕಾರ್ಯಾಚರಣೆ ನಡೆಸಲಾಯಿತು. ಸಾರ್ವಜನಿಕರು ಸೇತುವೆ ಮೇಲೆ ನಿಂತು ವೀಕ್ಷಿಸುತ್ತಿದ್ದರಿಂದ ವಾಹನ ಸಂಚಾರಕ್ಕೂ ಅಡ್ಡಿಯುಂಟಾಯಿತು. ಸ್ಥಳದಲ್ಲಿ ಕೆಎಸ್‌ಆರ್‌ಪಿ ಪೊಲೀಸ್‌ ತುಕಡಿಯೊಂದನ್ನು ನಿಯೋಜಿಸಲಾಗಿತ್ತು.

ಸಿದ್ದಾರ್ಥ ಘಟನೆಯ ಕಹಿ ನೆನಪು
ಮಮ್ತಾಜ್‌ ಆಲಿ ಅವರ ಪರಿಚಯಸ್ಥರು ಶೋಧ ಕಾರ್ಯಾಚರಣೆಯನ್ನು ವೀಕ್ಷಿಸುತ್ತ ಆಲಿ ಅವರು ಜೀವಂತವಾಗಿಯೇ ಪತ್ತೆಯಾಗುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದರು. ಇದೇ ವೇಳೆ ಕೆಲವು ಮಂದಿ 2019ರಲ್ಲಿ ಕಾಫಿ ಡೇ ಮಾಲಕ ಸಿದ್ದಾರ್ಥ್ ಮಂಗಳೂರಿನ ನೇತ್ರಾವತಿ ನದಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಹಿಘಟನೆಯನ್ನು ನೆನಪಿಸಿಕೊಂಡಿದ್ದಾರೆ. 2019ರ ಜು.29ರಂದು ರಾತ್ರಿ ಸೇತುವೆ ಮೇಲಿಂದ ಹಾರಿದ್ದ ಸಿದ್ದಾರ್ಥ ಅವರ ಮೃತದೇಹ ಘಟನೆ ನಡೆದ ಮೂರನೇ ದಿನದಂದು ಘಟನ ಸ್ಥಳದಿಂದ ಸುಮಾರು 4.5 ಕಿ.ಮೀ ದೂರದಲ್ಲಿ ಹಿನ್ನೀರಿನಲ್ಲಿ ಪತ್ತೆಯಾಗಿತ್ತು.

ಏನೇನಾಯಿತು?
ಮುಂಜಾನೆ 3.00: ಮನೆಯಿಂದ ಕಾರಿನಲ್ಲಿ ಹೊರಗೆ ಹೊರಟ ಮಮ್ತಾಜ್‌ ಆಲಿ
3.20: ಎಂಸಿಎಫ್‌ ಬಳಿ ಬಸ್‌ನ ಹಿಂಬಾಗಕ್ಕೆ ಕಾರು ಢಿಕ್ಕಿ
4.00: “ನಾನು ಬದುಕುಳಿಯು ವುದಿಲ್ಲ’ ಎಂದು ಫ್ಯಾಮಿಲಿ ಗ್ರೂಪ್‌ಗೆ ವಾಯ್ಸ… ಮೆಸೇಜ್‌
4:40: ಮೆಸೇಜ್‌ ನೋಡಿದ ಪುತ್ರಿ, ಮನೆಯವರಿಂದ ಹುಡುಕಾಟ
ಬೆ. 7:00: ಕೂಳೂರು ಸೇತುವೆ ಮೇಲೆ ಕಾರು ಪತ್ತೆ
ಬೆ. 7:30: ನದಿಯಲ್ಲಿ ಶೋಧ ಕಾರ್ಯಾಚರಣೆ ಆರಂಭ
ಸಂಜೆ 6:15: ಮಳೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತ
ರಾತ್ರಿ 7:00: ಮಳೆ ನಿಂತ ಬಳಿಕ ಕಾರ್ಯಾಚರಣೆ ಪುನರಾರಂಭ

Advertisement

Udayavani is now on Telegram. Click here to join our channel and stay updated with the latest news.

Next