Advertisement

ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ: ಬಸವ ಜಯಂತಿ ಆಚರಣೆ

05:01 PM Apr 22, 2018 | |

ಮುಂಬಯಿ: ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವರು. ಜನರಲ್ಲಿ ಮನೆಮಾಡಿದ್ದ ಅಂಧಶ್ರದ್ಧೆ, ಮೌಡ್ಯತೆ, ಕಂದಾಚಾರ, ಜಾತೀಯತೆಗಳನ್ನು ತೊಡೆದು ಹಾಕುವಲ್ಲಿ ತಮ್ಮ ವಚನದ ಮೂಲಕ ಜನ ಜಾಗೃತಿಯನ್ನು ಉಂಟು ಮಾಡಿದ ಮಹಾನ್‌ ದಾರ್ಶನಿಕ ಬಸವಣ್ಣ. ಬಸವಣ್ಣ ಅವರ  ವಚನಗಳನ್ನು ಎ. ಕೆ. ರಾಮಾನುಜನ್‌, ಇ. ಪಿ. ರೈಸ್‌ ಮೊದಲಾದವರು ಅನುವಾದ ಮಾಡಿದ್ದಾರೆ. ಬಸವಣ್ಣನ ಕುರಿತು ಅಧ್ಯಯನ ಮಾಡಲು ಹರಿಹರನ ರಗಳೆ ಒಂದು ಉತ್ತಮ ಚಾರಿತ್ರಿಕ ಆಕರ. ಬಸವಣ್ಣನವರ ಕುರಿತು ಬೇಂದ್ರೆ, ಶಿವಪ್ರಕಾಶ್‌, ಲಂಕೇಶ್‌, ಗಿರೀಶ್‌ ಕಾರ್ನಾಡ್‌ ಮೊದಲಾದವರು ರಚಿಸಿದ ನಾಟಕಗಳನ್ನು ತೌಲನಿಕವಾಗಿ ಅಧ್ಯಯನ ಮಾಡುವುದರಿಂದ ಅನೇಕ ಹೊಸ ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ. ವಚನ ಪರಂಪರೆಗೆ ಹೊಸ ಆಯಾಮ ನೀಡಿದ ಶ್ರೇಯಸ್ಸು ಬಸವಣ್ಣನದ್ದು. ಅವರಿಂದು ಜಾಗತಿಕವಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ಕನ್ನಡದಲ್ಲಿ ಇಂದಿಗೂ ವಚನ ಪರಂಪರೆ ಮುಂದುವರಿದುಕೊಂಡು ಬಂದಿದೆ. ಶರಣ ಪರಂಪರೆಯಿಂದ ಪ್ರೇರಣೆ ಪಡೆದು ತಾವು ಸಾವಿರಾರು ವಚನಗಳನ್ನು ರಚಿಸಿದ್ದಾರೆ ಎಂದು ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ| ಜೀವಿ ಕುಲಕರ್ಣಿ ಅವರು ವಿವರಿಸಿದರು.

Advertisement

ಕನ್ನಡ ವಿಭಾಗ  ಮುಂಬಯಿ ವಿಶ್ವವಿದ್ಯಾಲಯ ಎ. 18 ರಂದು ವಿಭಾಗದ ರಾನಡೆ ಭವನದಲ್ಲಿರುವ ವಿಭಾಗದ ಕೊಠಡಿಯಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಂಗ ಕಲಾವಿದ, ಖ್ಯಾತ ಛಾಯಾಚಿತ್ರಕಾರ ಪಿ. ಆರ್‌. ರವಿ ಶಂಕರ್‌ ಅವರು ಮಾತನಾಡಿ, ಜೀವನದಲ್ಲಿ ಅನುಭವವೇ ಪಾಠವನ್ನು ಕಲಿಸುತ್ತದೆ. ಬರೆಯುವಾಗ ಅಥವಾ ರಂಗಭೂಮಿಯಲ್ಲಿ ಅಭಿನಯಿಸುವಾಗ ಅನುಭವಿಸಬೇಕು. ಆಗ ಬರಹವಾಗಲೀ, ಪಾತ್ರವಾಗಲೀ ಅದು ನೈಜರೂಪವನ್ನು ತಾಳುತ್ತದೆ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ತಲ್ಲೀನತೆ  ಹಾಗೂ ತಾಧ್ಯಾತ್ಮ ಭಾವನೆ ಅಗತ್ಯ. ರಂಗಭೂಮಿಯಲ್ಲಿ ಅಭಿನಯಿಸುವಾಗ ಸ್ಥಳೀಯ ಭಾಷೆಯ ಸೊಗಡಿರಬೇಕು. ರಂಗಭೂಮಿಯಲ್ಲಿ ಪ್ರಯೋಗಗಳನ್ನು  ಮಾಡಲು ವಿಪುಲ ಅವಕಾಶಗಳಿವೆ ಎಂದು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರನ್ನು ವಿಭಾಗದ ಪರವಾಗಿ ಶಾಲು ಹೊದೆಸಿ, ಗ್ರಂಥ ಗೌರವದೊಂದಿಗೆ ಗೌರವಿಸಲಾಯಿತು.

ಬಸವಣ್ಣ ಜಗತ್ತು ಕಂಡ ಅಪರೂಪದ ಮಹಾ ಮಾನವತಾವಾದಿ, ದಾರ್ಶನಿಕ. ಜಾತ್ಯತೀತ ನಿಲುವನ್ನು ಮೈಗೂಡಿಸಿಕೊಂಡ ಬಸವಣ್ಣ ತಮ್ಮ ಸಾಧನೆಗಳಿಂದ ದೈವತ್ವಕ್ಕೇರಿದವನ್ನು. ಬದುಕು ಸಹ್ಯವಾಗಬೇಕು. ಎಲ್ಲೆಡೆ ಸಮಾನತೆ ನೆಲೆಸಬೇಕು ಎಂಬ ನಿಟ್ಟಿನಲ್ಲಿ ಹೋರಾಡಿದ ಬಸವಣ್ಣ ಯುಗಪುರುಷನೂ ಹೌದು. ಮಾತು-ಕೃತಿಗಳ ನಡುವೆ ಎರಡಿಲ್ಲದ ಬಾಳ್ವೆಗೆ ಆತ ಆದರ್ಶ ಪುರುಷ. ವರ್ತಮಾನಕ್ಕೆ ಯಾವತ್ತೂ ಸಲ್ಲುವ ಬಸವಣ್ಣನವರ ಉಪದೇಶವನ್ನು ನಾವು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು ಅತಿಥಿಗಳನ್ನು ಸ್ವಾಗತಿಸಿ ಬಸವ ಜಯಂತಿಯ ಹಿನ್ನೆಲೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ಮಹಾಪ್ರಬಂಧ ಮುಂಬಯಿ ಕನ್ನಡಿಗರ ಸಿದ್ಧಿ-ಸಾಧನೆಗಳು  ಕಾರ್ಯಕ್ರಮದ ನಡಾವಳಿಯ ಡಿವಿಡಿಯನ್ನು ಖ್ಯಾತ ಛಾಯಾಚಿತ್ರಕಾರ, ಕಲಾವಿದ, ಸಂಘಟಕ ರವಿಶಂಕರ್‌ ಅವರು ಬಿಡುಗಡೆ ಮಾಡಿದರು.

Advertisement

ಇದೇ ಸಂದರ್ಭದಲ್ಲಿ ಹೊಸ ಓದು ಮಾಲಿಕೆಯಲ್ಲಿ ವಿಭಾಗದ ವಿದ್ಯಾರ್ಥಿಗಳಾದ ಉದಯ ಶೆಟ್ಟಿ ಇವರು ತೇಜಸ್ವಿ ಅವರ ಕರ್ವಾಲೋ, ಸುರೇಖಾ ಶೆಟ್ಟಿ ಇವರು ಕ್ರಿಯಾಶೀಲ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಸುಧೀರ ದೇವಾಡಿಗ ಅವರು  ಗೋಪಾಲ ತ್ರಾಸಿ ಅವರ ಕಥಾ ಸಂಕಲನ, ದಿನಕರ ನಂದಿ ಚಂದನ್‌ ಇವರು ಎಂ. ಕೆ. ಇಂದಿರಾ ಅವರ ತುಂಗ-ಭದ್ರ ಕಾದಂಬರಿ, ನಳಿನಾ ಪ್ರಸಾದ್‌ ಇವರು ಪ್ರಬಂಧ ಸಂಗ್ರಹ,  ಜ್ಯೋತಿ ಶೆಟ್ಟಿ ಇವರು ಕುರ್ಕಾಲ್‌ ಅವರ ಕಾವ್ಯ; ಸಹೃದಯ ಸ್ಪಂದನ ಕೃತಿಗಳ ಕುರಿತು ಪ್ರಬಂಧ ಮಂಡಿಸಿದರು.

ವಿಭಾಗದ ಸಂಶೋಧನ ಸಹಯಕರಾದ ಮಧುಸೂದನ್‌ ವೈ. ವಿ., ಶಿವರಾಜ್‌ ಎಂ.ಜಿ., ಕುಮುದಾ ಆಳ್ವ, ವಿದ್ಯಾರ್ಥಿಗಳಾದ ಪಾಲನ್‌, ಗಣಪತಿ ಮೊಗವೀರ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.  ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next