ಮುಂಬಯಿ: ನಗರದ ಓಶಿವಾರಾದಲ್ಲಿ ಭಾರತೀಯ ತಂಡದ ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುವುದಕ್ಕಾಗಿ ಜಗಳವಾಡಿದ ನಂತರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಆರು ಆರೋಪಿಗಳು ಸೆಲ್ಫಿಗಾಗಿ ಕ್ರಿಕೆಟಿಗ ಪೃಥ್ವಿ ಶಾ ಬಳಿ ಗುಂಪುಗೂಡಿದ ನಂತರ ಮುಂಜಾನೆ ಐಷಾರಾಮಿ ಹೋಟೆಲ್‌ನಲ್ಲಿ ಸಮಸ್ಯೆ ಪ್ರಾರಂಭವಾಯಿತು. ಸೆಲ್ಫಿಗಾಗಿ ವಿನಂತಿಗಳು ನಿರಂತರವಾದಾಗ ಶಾ ಅವರು ಕೆಲವರನ್ನು ನಿರಾಕರಿಸಿದರು ಎಂದು ಅಧಿಕಾರಿ ಹೇಳಿದರು.
“ಹೋಟೆಲ್ ಮ್ಯಾನೇಜರ್ ಸ್ಥಳವನ್ನು ಖಾಲಿ ಮಾಡುವಂತೆ ಹೇಳಿದ ನಂತರ ಆರೋಪಿಗಳು ಕೋಪಗೊಂಡರು. ಶೀಘ್ರದಲ್ಲೇ ಆರೋಪಿಗಳು ಕ್ರಿಕೆಟಿಗ ಪೃಥ್ವಿ ಶಾ ಹೋಟೆಲ್‌ನಿಂದ ಹೊರಹೋಗುತ್ತಿದ್ದಾರೆಂದು ನಂಬಿ ಕಾರನ್ನು ಚೇಸ್ ಮಾಡಿದರು. ಆದರೆ, ಕ್ರಿಕೆಟಿಗ ಶಾ ಅವರ ಸ್ನೇಹಿತರೊಬ್ಬರು ಅದರಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅವರು ಹೇಳಿದರು.
ವಾದ ವಿವಾದವು ತೀವ್ರ ಗೊಂಡು ಬೇಸ್‌ಬಾಲ್ ಬ್ಯಾಟ್ ನಲ್ಲಿ ಹಲ್ಲೆ ಮಾಡುವಷ್ಟರ ಮಟ್ಟಿಗೆ ಹೋಗಿದೆ. ಶಾ ಅವರ ಸ್ನೇಹಿತನ ದೂರಿನ ಪ್ರಕಾರ, ಬುಧವಾರ ಮುಂಜಾನೆ ಐಷಾರಾಮಿ ಹೋಟೆಲ್‌ನಲ್ಲಿ ಇಬ್ಬರು ಅಭಿಮಾನಿಗಳು (ಒಬ್ಬ ಪುರುಷ ಮತ್ತು ಮಹಿಳೆ) ಸೆಲ್ಫಿ ಕೇಳಿದಾಗ ಜಗಳ ಪ್ರಾರಂಭವಾಯಿತು.ಕೆಲವು ಚಿತ್ರಗಳ ನಂತರ, ಹೆಚ್ಚಿನವುಗಳಿಗಾಗಿ ಒತ್ತಾಯಿಸಿದಾಗ, ಶಾ ಅಭಿಮಾನಿಗಳನ್ನು ದೂರ ಕಳುಹಿಸಲು ತನ್ನ ಸ್ನೇಹಿತ ಮತ್ತು ಹೋಟೆಲ್‌ನ ವ್ಯವಸ್ಥಾಪಕರನ್ನು ಕರೆಡಿದ್ದಾರೆ. ಆ ಬಳಿಕವೂ ಅಭಿಮಾನಿಗಳು ಪೃಥ್ವಿ ಅವರಿಗಾಗಿ ಹೊರಗೆ ಕಾಯುತ್ತಿದ್ದರು. ಬೇಸ್‌ಬಾಲ್ ಬ್ಯಾಟ್‌ಗಳೊಂದಿಗೆ ಇತರರೊಂದಿಗೆ ಶಾ ಅವರನ್ನು ಸುತ್ತುವರಿದರು ಎಂದು ದೂರಿನಲ್ಲಿ ಹೇಳಿಕೊಳ್ಳಲಾಗಿದೆ.
ಶಾ ಮತ್ತು ಅವರ ಸ್ನೇಹಿತ ಕಾರು ಓಡಿಸಿದಾಗ, ಅವರು ಕಾರನ್ನು ಹಿಂಬಾಲಿಸಿದ್ದು, ಟ್ರಾಫಿಕ್ ಸಿಗ್ನಲ್‌ನಲ್ಲಿ ಅದನ್ನು ತಡೆದು ವಿಂಡ್‌ಶೀಲ್ಡ್ ಅನ್ನು ಮುರಿದರು. ಮಾತ್ರವಲ್ಲದೆ ನಕಲಿ ಪೊಲೀಸ್ ಕೇಸ್ ದಾಖಲಿಸುವುದಾಗಿ ಬೆದರಿಸಿ 50 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿ ಸಪ್ನಾ ಗಿಲ್ ಎಂಬಾಕೆಯ ಪರ ವಕೀಲ ಅಲಿ ಕಾಶಿಫ್ ಖಾನ್, ಪೃಥ್ವಿ ಶಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಗಿಲ್ ಅವರ ಸ್ನೇಹಿತೆ ಚಿತ್ರೀಕರಿಸಿದ ವಿಡಿಯೋದಲ್ಲಿ ಮುರಿದ ಬೇಸ್‌ಬಾಲ್ ಬ್ಯಾಟ್ ಅನ್ನು ಹಿಡಿದಿರುವ ಪೃಥ್ವಿ ಶಾ ಅವರೊಂದಿಗೆ ಆಕೆ ಹೋರಾಡುತ್ತಿರುವುದು ಕಂಡು ಬಂದಿದೆ.