ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ಸರಬರಾಜು ಭಾರೀ ಪ್ರಮಾಣದ ವೈಫಲ್ಯದಿಂದಾಗಿ, ಇಡೀ ಮುಂಬೈ ನಗರಿ ವಿದ್ಯುತ್ ಕಡಿತದಿಂದಾಗಿ ಜನರು, ಕಚೇರಿ, ಕೈಗಾರಿಕೆ ಪ್ರದೇಶಗಳಲ್ಲಿ ಪರದಾಡುವಂತಾಗಿದೆ. ಸ್ಥಳೀಯ ರೈಲು , ಮೆಟ್ರೋ ಸಂಚಾರ ಸ್ಥಗಿತಗೊಂಡಿರುವುದಾಗಿ ವರದಿ ತಿಳಿಸಿದೆ.
ಬೆಳಗ್ಗೆ 10ಗಂಟೆಯಿಂದ ವಿದ್ಯುತ್ ಕಡಿತಗೊಂಡಿದ್ದು, ಬೃಹನ್ಮುಂಬಯಿ ಇಲೆಕ್ಟ್ರಿಸಿಟಿ ಮತ್ತು ಟ್ರಾನ್ಸ್ ಪೋರ್ಟ್ (BEST) ಕೂಡಾ ಈ ಘಟನೆಯನ್ನು ಖಚಿತಪಡಿಸಿದೆ. ಟಾಟಾ ಕಂಪನಿಯ ವಿದ್ಯುತ್ ಸರಬರಾಜು ವೈಫಲ್ಯದಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ಅನಾನುಕೂಲತೆಗೆ ವಿಷಾದವ್ಯಕ್ತಪಡಿಸುವುದಾಗಿ ಬೆಸ್ಟ್ ತಿಳಿಸಿದೆ.
ದಕ್ಷಿಣ ಮತ್ತು ಉತ್ತರ ಭಾಗದಲ್ಲಿನ ನಗರಗಳ ಜನರು ಟ್ವೀಟರ್ ನಲ್ಲಿ ವಿದ್ಯುತ್ ಕಡಿತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಸರಬರಾಜಿನ ಗ್ರಿಡ್ ವೈಫಲ್ಯದಿಂದ ಥಾಣೆಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಬೆಳಗ್ಗೆಯಿಂದಲೇ ಕಡಿತವಾಗಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ಖುಷ್ಬೂ ರಾಜೀನಾಮೆ! ಬಿಜೆಪಿ ಸೇರ್ಪಡೆ ಬಹುತೇಕ ಖಚಿತ
ಮುಂಬೈನ ಕೋಲಾಬಾ, ಮಾಹೀಂ ಮತ್ತು ಬಾಂದ್ರಾದ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ಜನರು ಪರದಾಡುವಂತಾಗಿದೆ. ರೈಲು ಹಾಗೂ ಮೆಟ್ರೋ ಸಂಚಾರಕ್ಕೂ ಇದರಿಂದ ತೊಂದರೆಯಾಗಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ವರದಿ ತಿಳಿಸಿದೆ.