ಮುಂಬಯಿ: ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿ ರೆಸ್ಟೋರೆಂಟ್‌ನಲ್ಲಿ ಅಶ್ಲೀಲ ನ್ಯತ್ಯ ಮತ್ತು ಮದ್ಯಪಾನದಲ್ಲಿ ತೊಡಗಿದ್ದ ಆರೋಪದಡಿ ಮುಂಬಯಿ ಪೊಲೀಸರು ರವಿವಾರ ಮುಂಜಾನೆ 28 ಮಹಿಳೆಯರು ಸೇರಿದಂತೆ 97 ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಉಪನಗರ ಜೋಗೇಶ್ವರಿಯ ಲಿಂಕ್ ರೋಡ್ ನಲ್ಲಿರುವ ‘ಬಾಂಬೆ ಬ್ರೂಟ್ ‘ ರೆಸ್ಟೋರೆಂಟ್ ಮೇಲೆ ಪೊಲೀಸರು ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ 97 ಮಂದಿಯನ್ನು ಬಂಧಿಸಿದ್ದಾರೆ.
ಮಹಿಳೆಯರನ್ನು ಅನಂತರ ಬಿಡುಗಡೆ ಮಾಡಲಾಗಿದ್ದು, ರೆಸ್ಟೋರೆಂಟ್‌ನ ಮ್ಯಾನೇಜರ್ ಮತ್ತು ಮೂವರು ವೈಟರ್ ಗಳು ಸೇರಿದಂತೆ ಇತರರನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿಯ ಆಧಾರದ ಮೇಲೆ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದಾಗ ಅಲ್ಲಿ ಜನರು ನೃತ್ಯ, ಮದ್ಯ ಸೇವನೆ ಮತ್ತು ಹುಕ್ಕಾ ಧೂಮಪಾನದ ನಶೆಯಲ್ಲಿ ತೇಲುತ್ತಿದ್ದರು. ಬಂಧಿತರಲ್ಲಿ ಹೆಚ್ಚಿನವರು ನಗರದ ಶ್ರೀಮಂತ ಕುಟುಂಬಗಳಿಗೆ ಸೇರಿದವರಾಗಿದ್ಧಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಾಕ್ ಡೌನ್ ನಿರ್ಬಂಧಗಳ ಸಡಿಲಿಕೆಯ ಅನಂತರ ರೆಸ್ಟೋರೆಂಟ್ ಮ್ಯಾನೇಜರ್ ಈ ಜನರನ್ನು ಸಂಪರ್ಕಿಸಿ, ತಾವು ರೆಸ್ಟೋರೆಂಟ್ ಅನ್ನು ಪುನರಾರಂಭಿಸಿದ್ದೇವೆ ಎಂದು ತಿಳಿಸಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ ಎಂದು ಒಶಿವಾರಾ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ದಯಾನಂದ್ ಬಂಗಾರ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 294 (ಸಾರ್ವಜನಿಕವಾಗಿ ಅಶ್ಲೀಲ ಕೃತ್ಯ), 188 (ಸಾರ್ವಜನಿಕ ಸೇವಕರ ಆದೇಶಕ್ಕೆ ಅಸಹಕಾರ), 285 (ಬೆಂಕಿ ಅಥವಾ ದಹನಕಾರಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ವರ್ತನೆ) ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಾಲಿಸಲಾಗಿದೆ.