ಮುಂಬಯಿ : ರೈಲ್ವೇ ನೇಮಕಾತಿ ಪರೀಕ್ಷೆಯನ್ನು ತಾವು ಪಾಸು ಮಾಡಿಕೊಂಡಿರುವುದರಿಂದ ಈ ಕೂಡಲೇ ತಮಗೆ ಸೆಂಟ್ರಲ್ ರೈಲ್ವೆಯಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಮುಂಬಯಿ ಮಾತುಂಗ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೇ ಸ್ಟೇಶನ್ ನಡುವೆ ರೈಲು ಸಂಚಾರವನ್ನು ತಡೆದಿರುವ ಪರಿಣಾವಾಗಿ ಲಕ್ಷಾಂತರ ಮುಂಬಯಿಗರು ರೈಲುಗಳಲ್ಲಿ ಪ್ರಯಾಣಿಸಲಾಗದೆ ತೀವ್ರ ಪರದಾಟಕ್ಕೆ ಗುರಿಯಾಗಿದ್ದಾರೆ.
ಪ್ರತಿಭಟಕಾರರು ಮಾತುಂಗ ಮತ್ತು ದಾದರ್ ಸ್ಟೇಶನ್ ನಡುವೆ ರೈಲು ಓಡಾಟವನ್ನು ತಡೆದಿದ್ದಾರೆ. ಪ್ರತಿಭಟನೆಯು ತೀವ್ರತೆಯನ್ನು ಪಡೆಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ರೈಲು ಹಳಿಯ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿರುವವರನ್ನು ತೆರವುಗೊಳಿಸಲು ಪೊಲೀಸರು ಮುಂದಾದಾಗ ಅವರ ಮೇಲೆ ಪ್ರತಿಭಟನಕಾರರು ಕಲ್ಲೆಸೆಯಲು ತೊಡಗಿದ್ದಾರೆ.
ತಾವು ನೇಮಕಾತಿ ಪರೀಕ್ಷೆಯನ್ನು ಪಾಸು ಮಾಡಿಕೊಂಡಿರುವುರಿಂದ ತಮಗೆ ಇನ್ನು ತಡಮಾಡದೆ ಸೆಂಟ್ರಲ್ ರೈಲ್ವೇಯಲ್ಲಿ ಉದ್ಯೋಗ ನೀಡಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ.
ಮುಂಬಯಿ ಲೋಕರ್ ಟ್ರೈನ್ ನ ಸೆಂಟ್ರಲ್ ಲೈನ್ ಜಾಲದಲ್ಲಿ ರೈಲುಗಳು ಛತ್ರಪತಿ ಶಿವಾಜಿ ಟರ್ಮಿನಸ್‌ನಿಂದ ಕರ್ಜಾತ್ ಮತ್ತು ಖಪೋಲಿ ವರೆಗೆ ಓಡುತ್ತವೆ. ಈ ಲೈನಿನಲ್ಲಿ ದಿನ ನಿತ್ಯ 40ರಿಂದ 42 ಲಕ್ಷ ಜನರು ಪ್ರಯಾಣಿಸುತ್ತಾರೆ.
ಸ್ಪಷ್ಟೀಕರಣ : ರೈಲ್ವೇಸ್ ಪಿಆರ್‌ಓ ಸುನೀಲ್ ಉದಾಸಿ ಅವರು ಸ್ಪಷ್ಟೀಕರಣ ನೀಡಿರುವ ಪ್ರಕಾರ ಪ್ರತಿಭಟನಕಾರರು ಯಾವುದೇ ರೈಲ್ವೆ ಪರೀಕ್ಷೆಯನ್ನು ಪಾಸು ಮಾಡಿಕೊಂಡಿಲ್ಲ. ಪ್ರತಿಭಟನಕಾರರು ರೈಲ್ವೇ ವರ್ಕ್‌ಶಾಪ್‌ನಲ್ಲಿ ಕೇವಲ ಅಪ್ರಂಟಿಸ್‌ಶಿಪ್ ಕೈಗೊಂಡಿದ್ದಾರೆ. ಹಾಗಿದ್ದರೂ ಮಾರ್ಚ್ 31ರ ವರೆಗೆ ಅವರಿಗೆ ಉದ್ಯೋಗಾವಕಾಶ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಅದನ್ನು ಪರಿಗಣಿಸಿ ರೈಲ್ವೇ ನೇಮಕಾತಿ ಪರೀಕ್ಷೆ ನಡೆಸಲಾಗುತ್ತದೆ.