ಮುಂಬಯಿ: ರವಿವಾರ ನಡೆದ “ಮುಂಬೈ ಹಾಫ್ ಮ್ಯಾರಥಾನ್’ನಲ್ಲಿ ಉತ್ತರಪ್ರದೇಶದ ಚಂದನ್ ಯಾದವ್ ಮತ್ತು ನಾಶಿಕ್‌ನ ರವಿನಾ ಗಾಯಕ್ವಾಡ್ ಚಾಂಪಿಯನ್ ಆಗಿದ್ದಾರೆ. ಇವರಿಬ್ಬರೂ ಕಾಲೇಜು ವಿದ್ಯಾರ್ಥಿಗಳೆಂಬುದು ವಿಶೇಷ. ಎನ್‌ಇಬಿ ನ್ಪೋರ್ಟ್ಸ್ ಆಯೋಜಿಸಿದ ಈ ಕೂಟದಲ್ಲಿ 20 ಸಾವಿರಕ್ಕೂ ಹೆಚ್ಚಿನ ಓಟಗಾರರು ಪಾಲ್ಗೊಂಡಿದ್ದರು. ಲೆಜೆಂಡ್ರಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ವಿಜೇತರಿಗೆ ಬಹುಮಾನವನ್ನೂ ನೀಡಿದರು.
ಪುರುಷರ ವಿಭಾಗದಲ್ಲಿ 21 ವರ್ಷದ ಚಂದನ್ ಯಾದವ್ 1 ಗಂಟೆ, 11.01 ನಿಮಿಷಗಳಲ್ಲಿ ದೂರವನ್ನು ಕ್ರಮಿಸಿ ಮೊದಲಿಗರಾದರು. ನಿತೀಶ್ ಕುಮಾರ್ ದ್ವಿತೀಯ (1:11.54 ನಿಮಿಷ) ಮತ್ತು ಪೀಯೂಷ್ ಮಸಾನೆ ತೃತೀಯ ಸ್ಥಾನಿಯಾದರು (1:13.20 ನಿಮಿಷ).
ವನಿತಾ ವಿಭಾಗದಲ್ಲಿ 19 ವರ್ಷದ ರವಿನಾ ಗಾಯಕ್ವಾಡ್‌ಗೆ ಇದು 21ಕೆ ವಿಭಾಗದ ಪದಾರ್ಪಣ ಸ್ಪರ್ಧೆಯಾಗಿತ್ತು. ಅವರು ಮೊದಲ ಯತ್ನದಲ್ಲೇ ಚಾಂಪಿಯನ್ ಆದರು. 1 ಗಂಟೆ, 27.43 ನಿಮಿಷದಲ್ಲಿ ದೂರವನ್ನು ಕ್ರಮಿಸಿದರು. ಸೆನೇಟ್ ಲಿಶಾರ್ಜ್ (1:29.41) ದ್ವಿತೀಯ, ರುಕ್ಮಿಣಿ ಭೌರೆ ತೃತೀಯ ಸ್ಥಾನ ಪಡೆದರು (1:31.23).
ದೃಷ್ಟಿಹೀನ ಓಟಗಾರರ ತಂಡವೊಂದು “ಗೈಡ್ ಇಂಡಿಯಾ ರನ್ನರ್’ ನೆರವಿನಿಂದ ಈ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದು ವಿಶೇಷ. ಅಂಗವಿಕಲರು, ಗಾಲಿಕುರ್ಚಿ ಕ್ರೀಡಾಪಟುಗಳು, ಮಿತ್ರಾಯನ ಎನ್‌ಜಿಒದ 150 ಮಕ್ಕಳು ಕೂಡ ಭಾಗವಹಿಸಿದರು.
ಕ್ರೀಡೆ ಜೀವನ ವಿಧಾನ
ಈ ಸಂದರ್ಭದಲ್ಲಿ ಮಾತಾಡಿದ ಸಚಿನ್ ತೆಂಡುಲ್ಕರ್, “ಭಾರತೀಯರಾದ ನಾವು ಕ್ರೀಡೆಯನ್ನು ಪ್ರೀತಿಸುತ್ತೇವೆ. ಮಾನಸಿಕ ಹಾಗೂ ದೈಹಿಕ ಪ್ರಯೋಜನೆಗಳಿಗಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಈ ಮೂಲಕ ಕ್ರೀಡೆಗಳನ್ನು ಜೀವನ ವಿಧಾನವಾಗಿ ಸ್ವೀಕರಿಸುವ ಸಮಯ ಇದಾಗಿದೆ. ಭಾರತದಾದ್ಯಂತ ಮ್ಯಾರಥಾನ್ ಪಾಲುಗಾರಿಕೆಯಲ್ಲಿ ಎನ್‌ಎಬಿ ಪಾಲುದಾರಿಗೆ ಯಶಸ್ಸನ್ನು ಕಾಣುತ್ತ ಬಂದಿದೆ’ ಎಂದರು.