ಮುಂಬಯಿ : ಗುರುವಾರ ರಾತ್ರಿ 7.30ರ ಸುಮಾರಿಗೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ಹೊರಗಡೆ ಪಾದಚಾರಿ ಸೇತುವೆಯ ಒಂದು ಭಾಗ ಕುಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿದೆ. 33 ಮಂದಿ ಗಾಯಾಳುಗಳಾಗಿದ್ದಾರೆ.
ಈ ದುರಂತಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಮಾತ್ರವಲ್ಲ ತಪ್ಪುಗಾರ ಅಧಿಕಾರಿಗಳ ವಿರುದ್ಧ ಕೊಲೆ ಕೇಸನ್ನು ದಾಖಲಿಸುವಂತೆ ಆಗ್ರಹಿಸಿವೆ.
ಎಂಟು ತಿಂಗಳ ಹಿಂದಷ್ಟೇ ಅಂಧೇರಿ ಸ್ಟೇಶನ್ ಬಳಿ ಪಾದಚಾರಿ ಸೇತುವೆಯ ಭಾಗವೊಂದು ರೈಲು ಹಳಿಯ ಮೇಲೆಯೇ ಕುಸಿದು ಬಿದ್ದಿತ್ತು. ಅದಾಗಿ ಇದೀಗ ಮತ್ತೆ ಪಾದಚಾರಿ ಸೇತುವೆ ಕುಸಿದಿರುವುದು ಕಳಪೆ ಕಾಮಗಾರಿ, ಭ್ರಷ್ಟಾಚಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ವಿರೋಧ ಪಕ್ಷಗಳು ಕೂಗೆಬ್ಬಿಸಿವೆ.
ನಿನ್ನೆ ಗುರುವಾರ ರಾತ್ರಿ 7.30ರ ಹೊತ್ತಿಗೆ ಕುಸಿದ ಪಾದಚಾರಿ ಸೇತುವೆಯು ಛತ್ರಪತಿ ಶಿವಾಜಿ ಟರ್ಮಿನಸ್ ಅನ್ನು ಟೈಮ್ಸ್ ಆಫ್ ಇಂಡಿಯಾ ಕಟ್ಟಡದ ಸಮೀಪಕ್ಕೆ ಸಂಪರ್ಕಿಸುತ್ತಿತ್ತು. 26/11ರ ಮುಂಬಯಿ ಉಗ್ರ ದಾಳಿಯು ಇದೇ ಸೇತುವೆಯ ಮೂಲಕ ಸಾಗಿದ ಕಾರಣ ಇದಕ್ಕೆ ಕಸಬ್ ಬ್ರಿಜ್ ಎಂಬ ಹೆಸರು ಅನಂತರ ಜನರ ಬಾಯಿಯಲ್ಲಿ ಕೇಳಿ ಬರುತ್ತಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿರುವರಲ್ಲದೆ ಉನ್ನತ ಮಟ್ಟದ ತನಿಖೆಗೂ ಆದೇಶಿಸಿದ್ದಾರೆ. ಆದರೆ ಇದರಿಂದ ವಿಪಕ್ಷಗಳಿಗೆ ತೃಪ್ತಿಯಾಗಿಲ್ಲ. ಈ ಸೇತುವೆಯು ಸುಮಾರು 40 ವರ್ಷಗಳಷ್ಟು ಹಳೆಯದ್ದಾಗಿದೆ.