ಮುಂಬೈ: ಬಾಲಿವುಡ್ ನಟಿ, ಹಲವಾರು ದಿನಗಳಿಂದ ಸುದ್ದಿಯಲ್ಲಿರುವ ಕಂಗನಾ ರಣಾವುತ್ ವಿರುಧ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ.
ಮುಂಬೈ ನ ಬಾಂದ್ರ ಮ್ಯಾಜಿಸ್ಟ್ರೇಟ್ ಮೆಟ್ರೋಪಾಲಿಟನ್ ಕೋರ್ಟ್ ಆದೇಶದ ಹಿನ್ನಲೆಯಲ್ಲಿ. ಬಾಂದ್ರ ಠಾಣೆಯ ಪೊಲೀಸರು ನಟಿ ಕಂಗನಾ ರಣಾವುತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂಡೆಲ್ ವಿರುದ್ಧ, ಸಾಮಾಜಿಕ ಜಾಲತಾಣಗಳ ಮೂಲಕ ಸಮೂದಾಯಗಳಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ ಎಂಬ ದೂರಿನ ಮೇರೆಗೆ 124ಎ ಸೇರಿ ವಿವಿಧ ಸೆಕ್ಷನ್ ಗಳಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಪೋಸ್ಟ್ ಮೂಲಕ ಇಬ್ಬರೂ ಕೂಡ ದ್ವೇಷ ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿ ನಿರ್ದೇಶಕ ಮತ್ತು ಫಿಟ್ನೆಸ್ ತರಬೇತುದಾರ ಮುನ್ನವಾರಲಿ ಸಯ್ಯದ್ ಪ್ರಕರಣ ದಾಖಲಿಸಿದ್ದರು.
ದೂರಿನಲ್ಲಿ ಈ ಹಿಂದೆ ಕಂಗನಾ ಮುಂಬೈಯನ್ನು ಪಾಕಿಸ್ಥಾನ ಆಕ್ರಮಿತ ಕಾಶ್ಮಿರಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದನ್ನೂ ಕೂಡ ಉಲ್ಲೇಖಿಸಲಾಗಿದೆ. ಮಾತ್ರವಲ್ಲದೆ ಕಂಗನಾ ಪೋಸ್ಟ್ ಮಾಡಿರುವ ಎಲ್ಲಾ ಟ್ವೀಟ್ ಗಳ ಹಿಂದಿನ ಉದ್ದೇಶವನ್ನು ತನಿಖೆಯಿಂದ ಬಯಲಿಗೆಳೆಯಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಏಪ್ರಿಲ್ ನಲ್ಲಿ ಸಹೋದರಿ ರಂಗೋಲಿ ಚಾಂಡೆಲ್ ಹೇಳಿಕೆ ಹಿನ್ನಲೆಯಲ್ಲಿ ವಿಡಿಯೋ ಮೂಲಕ ಸಮಜಾಯಿಸಿ ನೀಡಿದ್ದ ನಟಿ ಕಂಗನಾ ವಿರುದ್ಧ ಮುಂಬೈನ ಅಂಬೂಲಿ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿತ್ತು.