ಮುಂಬೈ: ಬೃಹನ್ಮುಂಬಯಿ ಎಲೆಕ್ಟ್ರಿಕ್ ಮತ್ತು ಟ್ರಾನ್ಸ್ ಪೋರ್ಟ್ (BEST)ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮೊಬೈಲ್ ಫೋನ್ ಗಳಲ್ಲಿ ಜೋರಾಗಿ ಸಂಭಾಷಣೆ ನಡೆಸುವುದು ಹಾಗೂ ಹೆಡ್ ಫೋನ್ ಗಳಿಲ್ಲದೇ ಆಡಿಯೋ, ವಿಡಿಯೋ ಬಳಸುವುದನ್ನು ನಿಷೇಧಿಸಿದೆ.
ಇದನ್ನೂ ಓದಿ:ಚಾರ್ಧಾಮ್ ದೇವಾಲಯದ ಆವರಣದಲ್ಲಿ ಜಿಯೋ ಟ್ರೂ 5ಜಿ ಸೇವೆ ಶುಭಾರಂಭ
ಎ.24ರಂದು BEST ಹೊರಡಿಸಿರುವ ಪ್ರಕಟನೆಯಲ್ಲಿ, ಪ್ರಯಾಣಿಕರ ದೂರುಗಳನ್ನು ಆಧರಿಸಿ ಯಾವುದೇ ಕಿರಿಕಿರಿ ಇಲ್ಲದೇ ಪ್ರಯಾಣಿಸಲು ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಹೊಸ ನಿಯಮದಂತೆ ಮುಂಬೈ ಮತ್ತು ಸುತ್ತಮುತ್ತಲಿನ ನಗರಗಳ ಬೆಸ್ಟ್ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರು ಬಸ್ ನೊಳಗೆ ಮೊಬೈಲ್ ಬಳಸಿ ಆಡಿಯೋ ಅಥವಾ ವಿಡಿಯೋ ವೀಕ್ಷಿಸಲು ಹೆಡ್ ಫೋನ್ ಉಪಯೋಗಿಸುವುದು ಕಡ್ಡಾಯ ಎಂದು ತಿಳಿಸಿದೆ.
ಮೊಬೈಲ್ ನಲ್ಲಿ ಜೋರಾಗಿ ಮಾತನಾಡುವುದು, ಹೆಡ್ ಫೋನ್ ಬಳಸದೇ ವಿಡಿಯೋ ವೀಕ್ಷಿಸುವುದರಿಂದ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತದೆ. ಈ ಅನನುಕೂಲತೆ ತಪ್ಪಿಸಲು ಹೊಸ ನಿಯಮ ಜಾರಿಗೊಳಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಪ್ರಯಾಣಿಕರ ವಿರುದ್ಧ ಬಾಂಬೆ ಪೊಲೀಸ್ ಕಾಯ್ದೆ ಕಲಂ 38/112ರ ಅಡಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಬೆಸ್ಟ್ ವಕ್ತಾರರು ತಿಳಿಸಿದ್ದಾರೆ.