ಮುಂಬಯಿ : ರನ್ ವೇ ದುರಸ್ತಿಗಾಗಿ ಮುಂಬಯಿ ವಿಮಾನ ನಿಲ್ದಾಣವನ್ನು ಇಂದು ಸೋಮವಾರ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯ ವರೆಗಿನ ಆರು ತಾಸುಗಳ ಅವಧಿಗೆ ಮುಚ್ಚಲಾಗಿದೆ. ನಾಳೆ ಮಂಗಳವಾರ ಎ.10ರಂದು ಕೂಡ ಇದೇ ಅವಧಿಯಲ್ಲಿ ವಿಮಾನ ನಿಲ್ದಾಣ ಮುಚ್ಚಿರುತ್ತದೆ ಎಂದು ಮೂಲಗಳು ತಿಳಿಸಿವೆ.
ರನ್‌ವೇ ದುರಸ್ತಿ ಕಾಮಗಾರಿಯ ಕಾರಣ ಈ ಅವಧಿಯಲ್ಲಿ ಮುಂಬಯಿ ನಿಲ್ದಾಣಕ್ಕೆ ಯಾವುದೇ ವಿಮಾನಗಳು ಬರುವುದಿಲ್ಲ; ಅಂತೆಯೇ ಇಲ್ಲಿಂದ ಯಾವುದೇ ವಿಮಾನಗಳು ಹಾರುವುದಿಲ್ಲ ಎಂದು ಮೂಲಗಳು ಹೇಳಿವೆ.
ಮುಂಬಯಿ ವಿಮಾನ ನಿಲ್ದಾಣದಲ್ಲಿ ಎರಡು ರನ್‌ವೇಗಳು ಇವೆ. ಆದರೆ ಅವು ಪರಸ್ಪರ ಸಂಧಿಸುತ್ತವೆ. ಇದರಿಂದಾಗಿ ಒಂದು ಹೊತ್ತಿನಲ್ಲಿ ಒಂದು ರನ್ ವೇ ಮಾತ್ರವೇ ಬಳಕೆಗೆ ಸಿಗುತ್ತದೆ.
ಮುಂಬಯಿ ವಿಮಾನ ನಿಲ್ದಾಣದಲ್ಲಿನ 12,008 ಅಡಿ ಉದ್ದದ ರನ್ ವೇಯನ್ನು ಒಂದು ತಾಸಿನ ಅವಧಿಯಲ್ಲಿ ಸುಮಾರು 46 ಟೇಕ್ ಆಫ್ ಮತ್ತು ನಿರ್ಗಮನಕ್ಕೆ ಯೋಗ್ಯವಾಗುವಂತೆ ನಿರ್ಮಿಸಲಾಗಿದೆ. ಆದರೆ ಇದು ಗಂಟೆಗೆ 50ಕ್ಕಿಂತ ಅಧಿಕ ಸಂಚಾರಗಳಿಗೆ ಅವಕಾಶ ಕಲ್ಪಿಸಿರುತ್ತದೆ.
ರನ್ ವೇ ದುರಸ್ತಿ ಸಂಬಂಧ ವಿಮಾನ ನಿಲ್ದಾಣ ಮುಚ್ಚಲಾಗಿರುವ ಪ್ರಯುಕ್ತ ಮುಂಬಯಿ ಏರ್ ಪೋರ್ಟಿಗೆ ಬರುವ ಮತ್ತು ಹೋಗುವ ವಿಮಾನಗಳ ಪರಿಷ್ಕೃತ ವೇಳಾ ಪಟ್ಟಿಯನ್ನು ಏರ್ ಲೈನ್ಸ್ ನವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದಾರೆ.
ಮುಂಬಯಿ ವಿಮಾನ ನಿಲ್ದಾಣವು ದಿಲ್ಲಿಯ ಬಳಿಕದಲ್ಲಿ ದೇಶದ ಎರಡನೇ ಅತೀ ದೊಡ್ಡ ವಾಣಿಜ್ಯ ವಿಮಾನ ನಿಲ್ದಾಣವಾಗಿದೆ.