ಮುಂಬೈ: ಪಶ್ಚಿಮ ರೈಲ್ವೆಯ ಬದಲಾದ ವೇಳಾಪಟ್ಟಿಯ ಹಿನ್ನೆಲೆಯಲ್ಲಿ ರೈಲು 1 ಗಂಟೆ ತಡವಾಗಿ ಆಗಮಿಸಿದೆ ಎಂದು ಆರೋಪಿಸಿ ಪ್ರಯಾಣಿಕರು ರೈಲ್ವೆ ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಫಾಲ್ಗರ್ ಜಿಲ್ಲೆಯಲ್ಲಿ ನಡೆದಿದೆ.
ದಹನ್ ರೈಲ್ವೆ ನಿಲ್ದಾಣದ ಹಳಿ ಮೇಲೆ ಕುಳಿತು ರೈಲು ತಡೆಗೆ ಮುಂದಾಗಿದ್ದ ಪ್ರತಿಭಟನಾಕಾರರನ್ನು ರೈಲ್ವೆ ಪೊಲೀಸರು ಚದುರಿಸಿದ್ದಾರೆ.
ಪಾಲ್ಗರ್ ಜಿಲ್ಲೆಯ ದಹನು ನಿಲ್ದಾಣದಿಂದ ಮುಂಜಾನೆ 4.40ಕ್ಕೆ ಹೊರಡುವ ಲೋಕಲ್ ರೈಲು, ಬೆಳಗ್ಗೆ 7.04ಕ್ಕೆ ದಕ್ಷಿಣ ಮುಂಬೈನ ಚರ್ಚ್‌ಗೇಟ್ ತಲುಪುತ್ತಿತ್ತು. ಆದರೆ ಬುಧವಾರದಿಂದ ಬೆಳಗ್ಗಿನ ಲೋಕಲ್ ರೈಲಿನ ವೇಳಾಪಟ್ಟಿಯನ್ನು ಬದಲಿಸಲಾಗಿದೆ.
ಇದನ್ನೂ ಓದಿ:ಟ್ರಂಪ್‌ಗೆ ಮತ್ತೂಂದು ಆಘಾತ : ಎಚ್-1ಬಿ ವೀಸಾ ನಿಬಂಧನೆಗಳಿಗೆ ಕೋರ್ಟ್ ತಡೆ
ಇದರಂತೆ ನಿಗದಿಗಿಂತ ರೈಲು 1 ಗಂಟೆ ತಡವಾಗಿ ಹೊರಡುತ್ತಿದೆ. ದಹನು ನಿಲ್ದಾಣದಿಂದ 5.40ಕ್ಕೆ ಹೊರಡುವ ರೈಲು ಅಂಧೇರಿ ಪಶ್ಚಿಮಕ್ಕೆ 7.34ಕ್ಕೆ ತಲುಪುವ ಹಿನ್ನೆಲೆಯಲ್ಲಿ ಬದಲಾದ ವೇಳಾಪಟ್ಟಿಗೆ ಪ್ರತಿಭಟನಾಕಾರರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಪ್ರಯಾಣಿಕರ ಬೇಡಿಕೆ ಕುರಿತು ಪರಾಮರ್ಶೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಮೂಲ ವೇಳಾಪಟ್ಟಿ ಪ್ರಕಾರವೇ ಲೋಕಲ್ ರೈಲು ಸಂಚಾರ ನಡೆಸಲಿದೆ’ ಎಂದು ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಭರವಸೆ ನೀಡಿದ್ದಾರೆ.