ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಂಟೆ ಬಳಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲು ಭೂಸ್ವಾಧೀನ ಪ್ರಕ್ರಿಯೆಗೆ ಸಿದ್ಧತೆ ನಡೆಸಲಾಗಿದ್ದು, ಭೂ ಸ್ವಾಧೀನ ವಿರೋಧಿಸಿ ಗುರುವಾರ (ಫೆ.4ರಂದು) ರೈತರು ಹುಲಿಕುಂಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ನೆಲಮಂಗಲ ತಾಲೂಕಿನ ಓಬಳಾಪುರ ಹಾಗೂ ಹುಲಿಕುಂಟೆ ವ್ಯಾಪ್ತಿಯ 1,150 ಎಕರೆ ಪ್ರದೇಶದಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ (ಎಂಎಂಎಲ್‌ಪಿ) ಸ್ಥಾಪನೆಯಾಗುತ್ತಿದೆ.
ನೆಲಮಂಗಲ ತಾಲೂಕಿನ ಓಬಳಾಪುರ ಕೈಗಾರಿಕಾ ಪ್ರದೇಶದಲ್ಲಿ 550 ಎಕರೆ ಭೂ ಸ್ವಾಧೀನಕ್ಕೆ ಈಗಾಗಲೇ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಮಾಡಲಾಗಿದೆ. ನೆಲಮಂಗಲ ತಾಲೂಕಿಗೆ ಹೊಂದಿಕೊಂಡಂತೇ ಇರುವ ತುಮಕೂರು – ದಾಬಸ್‌ಪೇಟೆ ಹೆದ್ದಾರಿ ಬದಿಯಲ್ಲಿನ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಕೈಗಾರಿಕಾ ಪ್ರದೇಶದಲ್ಲಿ 600 ಎಕರೆ ಗುರುತಿಸಲಾಗಿದೆ.
ಪಾರ್ಕ್ ಸ್ಥಾಪನೆ ಮಾಡಲು ಉದ್ದೇಶಿಸಿರುವ ಓಬಳಾಪುರ ಹಾಗೂ ಹುಲಿಕುಂಟೆ ಭಾಗದಲ್ಲಿ ಬಹುತೇಕ ಸಣ್ಣ ಹಿಡುವಳಿದಾರ ರೈತರ ಸಂಖ್ಯೆಯೇ ಹೆಚ್ಚಾಗಿದ್ದು, ನೀರಾವರಿ ಸೌಲಭ್ಯದೊಂದಿಗೆ ಅಡಕೆ, ತೆಂಗು, ಬಾಳೆ ಸೇರಿದಂತೆ ತರಕಾರಿ ಬೆಳೆ ಬೆಳೆಯುವ ಮೂಲಕ ಜೀವನ ನಡೆಸುತ್ತಿದ್ದಾರೆ. ಸಣ್ಣ ಹಿಡುವಳಿದಾರ ರೈತರು ಹೈನುಗಾರಿಕೆ ಹಾಗೂ ಕುರಿ, ಮೇಕೆ ಸಾಕುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಯಾವುದೇ ಭೂಮಿಯನ್ನು ಸರ್ಕಾರ ಸ್ವಾಧೀನ ಮಾಡಿಕೊಳ್ಳುವ ಮುನ್ನ ಸ್ವಾಧೀನಕ್ಕೆ ಒಳಪಡುತ್ತಿರುವ ಪ್ರದೇಶದಲ್ಲಿನ ಜನರ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಬೇಕು. ಆ ಸಮೀಕ್ಷೆ ಆಧಾರದ ಮೇಲೆ ಭೂ ಸ್ವಾಧೀನದ ನಿರ್ಧಾರ ಕೈಗೊಳ್ಳಬೇಕು ಎಂಬುದು ರೈತರ ವಾದವಾಗಿದೆ.
ಹಣದಾಸೆಯ ಹೋರಾಟವಲ್ಲ
ನಮ್ಮ ಹಿರಿಯರು ಸಂಪಾದನೆ ಮಾಡಿರುವ ಭೂಮಿಯನ್ನು ನಮ್ಮ ಮಕ್ಕಳಿಗೂ ಉಳಿಸಿಕೊಟ್ಟು ಹೋಗಬೇಕು ಎನ್ನುವ ಪ್ರಾಮಾಣಿಕ ಹೋರಾಟ ನಮ್ಮದು. ಹಣದ ಆಸೆಗಾಗಿ ನಡೆಸುತ್ತಿರುವ ಹೋರಾಟ ನಮ್ಮದಲ್ಲ. ಭೂ ಸ್ವಾಧೀನದ ವಿರುದ್ಧ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡಲಾಗುವುದು ಎಂದು ಕೃಷಿ ಭೂಮಿ ಹೋರಾಟ ಸಮಿತಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.