Advertisement

Mullikatte: ನಾಡಗುಡ್ಡೆಯಂಗಡಿ-ಸೇನಾಪುರ ರಸ್ತೆ ಹೊಂಡಮಯ

02:39 PM Nov 14, 2024 | Team Udayavani |

ಮುಳ್ಳಿಕಟ್ಟೆ: ನಾಡ ಗುಡ್ಡೆಯಂಗಡಿಯಿಂದ ಸೇನಾಪುರ ರೈಲು ನಿಲ್ದಾಣ ಕ್ರಾಸ್‌ವರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಡಾಮರು ಎದ್ದು ಹೋಗಿ, ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ವಾಹನ ಸವಾರರು ಪ್ರಯಾಸಪಟ್ಟುಕೊಂಡು ಸಂಚರಿಸುವಂತಾಗಿದೆ.

Advertisement

ಸೇನಾಪುರ ರೈಲು ನಿಲ್ದಾಣ ಕ್ರಾಸ್‌ ಬಳಿಯಿಂದ ನಾಡಗುಡ್ಡೆಯಂಗಡಿಗೆ ಸಂಪರ್ಕಿಸುವ 1 ಕಿ.ಮೀ. ಉದ್ದದ ರಸ್ತೆಯ ಡಾಮರೆಲ್ಲ ಅಲ್ಲಲ್ಲಿ ಎದ್ದು ಹೋಗಿದೆ. ಹೊಂಡ-ಗುಂಡಿಮಯ ರಸ್ತೆಯಲ್ಲಿ ಸವಾರರು ಎದ್ದು, ಬಿದ್ದು ಸಂಚರಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಈ ರಸ್ತೆಯ ಅಭಿವೃದ್ಧಿಗೆ ಸ್ಥಳೀಯರು ಒತ್ತಾಯಿಸುತ್ತಿದ್ದರೂ, ಇತ್ತ ಯಾರೂ ಗಮನವೇ ಕೊಡದ ಕಾರಣ ಈ ರಸ್ತೆ ಅಭಿವೃದ್ಧಿ ಬೇಡಿಕೆಯಾಗಿಯೇ ಉಳಿದಿದೆ.

ಸುಮಾರು 200 ಮೀ. ದೂರದವರೆಗಿನ ರಸ್ತೆಯು 3 ವರ್ಷಗಳ ಹಿಂದೆ ಕಾಂಕ್ರೀಟಿಕರಣ ಆಗಿದೆ. ಬಾಕಿ ಉಳಿದ 1 ಕಿ.ಮೀ. ದೂರದವರೆಗಿನ ರಸ್ತೆಯಲ್ಲಿ ಹೆಸರಿಗಷ್ಟೇ ಡಾಮರೀಕರಣ ಆದಂತಿದೆ. ಡಾಮರಿಗಿಂತ ಜಾಸ್ತಿ ಹೊಂಡಗಳೇ ಇದೆ. ಅದು ಸಹ ಡಾಮರೀಕರಣ ಕಾಮಗಾರಿ ಆಗಿಯೇ 15 ವರ್ಷ ಕಳೆದಿದೆ. ಆ ಬಳಿಕ 3 ವರ್ಷಗಳ ಹಿಂದೆ ಒಮ್ಮೆ ಗುಂಡಿಗಳಿಗೆ ತೇಪೆ ಹಾಕಿದ್ದು ಬಿಟ್ಟರೆ, ಈವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಈ ರಸ್ತೆಯಲ್ಲಿ ನಡೆದೇ ಇಲ್ಲ.

ಪ್ರಮುಖ ರಸ್ತೆ
ಇದು ನಾಡಗುಡ್ಡೆಯಂಗಡಿಯಿಂದ ಸೇನಾಪುರ ಕ್ರಾಸ್‌ ಮೂಲಕ ಕುಂದಾಪುರಕ್ಕೆ ಸಂಪರ್ಕಿಸಲು ಹತ್ತಿರದ ಮಾರ್ಗವಾಗಿದೆ. ಕುಂದಾಪುರ – ಆಲೂರು ಬಸ್‌ಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ನಿತ್ಯ ಆರೇಳು ಶಾಲಾ ಬಸ್‌ಗಳು, ಇನ್ನಿತರ ನೂರಾರು ವಾಹನಗಳು ಸಂಚರಿಸುವ ಪ್ರಮುಖ ರಸ್ತೆ ಇದಾಗಿದ್ದರೂ, ಇದರ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಪ್ರಸ್ತಾವನೆ ಸಲ್ಲಿಕೆ
ನಾಡ ಗುಡ್ಡೆಯಂಗಡಿಯಿಂದ ಸೇನಾಪುರ ರೈಲು ನಿಲ್ದಾಣ ಕ್ರಾಸ್‌ವರೆಗಿನ ಡಾಮರು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಾಗಿದೆ. ಇದನ್ನು ಗ್ರಾ.ಪಂ. ಅನುದಾನದಲ್ಲಿ ಅಭಿವೃದ್ಧಿಪಡಿಸುವುದು ಕಷ್ಟ. ಅದಕ್ಕಾಗಿ ಗ್ರಾ.ಪಂ.ನಿಂದ ಈಗಾಗಲೇ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಕುಸುಮಾಕರ ಶೆಟ್ಟಿ, ಹೊಸಾಡು ಗ್ರಾ.ಪಂ. ಆಡಳಿತಾಧಿಕಾರಿ

Advertisement

ಗ್ರಾಮ ಆಡಳಿತವೇ ಇಲ್ಲ
ಸೇನಾಪುರ ಗ್ರಾಮವನ್ನು ಹೊಸಾಡು ಗ್ರಾ.ಪಂ.ಗೆ ಸೇರಿಸಲಾಗಿದೆ. ಈ ರಸ್ತೆಯ ಬಹುಭಾಗ ಸೇನಾಪುರ ಗ್ರಾಮಕ್ಕೆ ಸೇರುತ್ತದೆ. ಹೊಸಾಡು ಗ್ರಾ.ಪಂ.ಗೆ ಕಳೆದ 4 ವರ್ಷದಿಂದ ಆಡಳಿತವೇ ಇಲ್ಲ. ಅಧಿಕಾರಿಗಳದ್ದೇ ಆಡಳಿತವಾಗಿದೆ. ಹೊಸಾಡಿನಿಂದ ದೂರದ ಸೇನಾಪುರಕ್ಕಂತೂ ಇವರು ಯಾರೂ ಭೇಟಿಯೇ ನೀಡದ ಕಾರಣ ಈ ರಸ್ತೆಯ ಅಭಿವೃದ್ಧಿ, ಇಲ್ಲಿನ ಗ್ರಾಮದ ಇನ್ನಿತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಾಗಿದೆ ಅನ್ನುವುದು ಇಲ್ಲಿನ ಗ್ರಾಮಸ್ಥರ ಅಳಲು.

Advertisement

Udayavani is now on Telegram. Click here to join our channel and stay updated with the latest news.

Next