ಎಡಪದವು : ಮೂಲರಪಟ್ಣ ಫಲ್ಗುಣಿ ನದಿಗೆ ಅಡ್ಡಲಾಗಿ ಸಾರ್ವಜನಿಕರು ನಿರ್ಮಿಸಿರುವ ಮಣ್ಣಿನ ರಸ್ತೆಯಲ್ಲಿ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಸ್ತೆ ಹಾದುಹೋಗಿರುವ ಖಾಸಗಿ ಜಾಗದ ಮಾಲಕರಿಗೆ ಬಜಪೆ ಪೊಲೀಸರು ನೋಟಿಸ್ ನೀಡಿದ ಕಾರಣ ಜಾಗದ ಮಾಲಕರು ರಸ್ತೆಯನ್ನು ಬಂದ್ ಮಾಡಿದ ಘಟನೆ ಬುಧವಾರ ಬೆಳಗ್ಗೆ ಮುತ್ತೂರು ಭಾಗದಲ್ಲಿ ನಡೆದಿದೆ.
ಕಳೆದ ವರ್ಷ ಮೂಲರಪಟ್ಣ ಸೇತುವೆ ಮುರಿದು ಬಿದ್ದ ಅನಂತರ ಮುತ್ತೂರು- ಬಂಟ್ವಾಳ ಸಂಚಾರ ಮೊಟಕುಗೊಂಡಿದ್ದು, ಸಂಚಾರಕ್ಕಾಗಿ ಸಾರ್ವಜನಿಕರು ತೂಗು ಸೇತುವೆಯನ್ನು ಅವಲಂಬಿಸಿಕೊಂಡಿದ್ದರು. ಆದರೆ ಹೊಸ ಸೇತುವೆ ವಿಳಂಬವಾಗಿರುವುದನ್ನು ಗಮನಿಸಿದ ಸಾರ್ವಜನಿಕರು ಫಲ್ಗುಣಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಮೂಲರಪಟ್ಣ ಮಸೀದಿ ಸಮೀಪದಿಂದ ಮುತ್ತೂರಿನ ಖಾಸಗಿ ಜಾಗದವರೆಗೆ ನದಿಗೆ ಅಡ್ಡಲಾಗಿ ಮೋರಿ ಅಳವಡಿಸಿ, ಲೋಡ್‌ಗಟ್ಟಲೆ ಮಣ್ಣು ತುಂಬಿಸಿ ತಾತ್ಕಾಲಿಕ ಮಣ್ಣಿನ ರಸ್ತೆ ಯನ್ನು ನಿರ್ಮಿಸಿದ್ದರು. ಬಸ್‌ಗಳನ್ನು ಹೊರತುಪಡಿಸಿ ಇನ್ನಿತರ ಎಲ್ಲ ವಾಹನಗಳು ಸಂಚರಿಸುತ್ತಿರುವುದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗಿತ್ತು. ಈ ನಡುವೆ ನಿನ್ನೆ ವ್ಯಕ್ತಿ ಯೋರ್ವರು ಬಜಪೆ ಠಾಣೆಗೆ ದೂರವಾಣಿ ಕರೆ ಮಾಡಿ ತಾತ್ಕಾಲಿಕ ಮಣ್ಣಿನ ರಸ್ತೆಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು.
ನದಿಯ ದಡದಿಂದ ಮುತ್ತೂರಿನ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಒಳ ರಸ್ತೆಯು ಖಾಸಗಿಯವರ ಜಮೀನಿ ನಲ್ಲಿ ಹಾದುಹೋಗಿತ್ತು. ಬಜಪೆ ಪೊಲೀಸರು ಖಾಸಗಿಯವರಿಗೆ ಇರುವ ಜಮೀನ ಲ್ಲಿರುವ ರಸ್ತೆಯ ಮೂಲಕ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂದು ನೋಟಿಸ್ ಜಾರಿ ಮಾಡಿದ್ದರು.
ಇದರಿಂದ ಬೇಸರಗೊಂಡ ಖಾಸಗಿ ವ್ಯಕ್ತಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ತನ್ನ ಜಮೀನಿನಲ್ಲಿ ರಸ್ತೆ ನಿರ್ಮಿಸಿಕೊಟ್ಟರೆ ನನಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ಆಕ್ರೋಶಗೊಂಡು ಈ ಜಾಗದಲ್ಲಿ ಗೇಟ್ ಹಾಕಿ ಮುಚ್ಚಿದ್ದರಿಂದ ಸಾರ್ವ ಜನಿಕರಿಗೆ ಸಂಚಾರಕ್ಕೆ ಅನಾನುಕೂಲ ಉಂಟಾಗಿತ್ತು.
ವಿಷಯ ತಿಳಿದ ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿ ಸ್ಥಳಕ್ಕಾಗಮಿಸಿದ ಪೊಲೀಸರ ಜತೆ ನೋಟಿಸ್ ನೀಡಿರುವಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದ ವ್ಯಕ್ತಿ ಯಾರೆಂದು ಕೇಳಿದರು. ಲಿಖೀತ ದೂರು ನೀಡದೆ ಕೇವಲ ಫೋನಿನ ಮೂಲಕ ನೀಡಿದ ದೂರಿನ ಆಧಾರದಲ್ಲಿ ನೋಟಿಸ್ ನೀಡಿದ್ದು ಯಾಕೆ? ಈಗ ರಸ್ತೆ ಮುಚ್ಚಿರುವುದರಿಂದ ಸಾರ್ವ ಜನಿಕರಿಗೆ ಅನಾನುಕೂಲವಾಗಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
ಕೊನೆಗೆ ಪೊಲೀಸರು, ಜಮೀನು ಮಾಲಕರು ಹಾಗೂ ಸಾರ್ವಜನಿಕರ ಜತೆ ಪರಸ್ಪರ ಮಾತುಕತೆ ನಡೆಸಿ, ಮನವೊಲಿಸಿ ಮುಚ್ಚಿದ ಗೇಟನ್ನು ತೆರವುಗೊಳಿಸಿದರು. ಈಗ ತಾತ್ಕಾಲಿಕ ಮಣ್ಣಿನ ರಸ್ತೆಯಲ್ಲಿ ಮತ್ತೆ ಸಂಚಾರ ಆರಂಭಗೊಂಡಿದೆ.