ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 13ನೇ ವರ್ಷವೂ ಫೋರ್ಬ್ಸ್ ನ ಭಾರತೀಯರ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ದೇಶದ ನೂರು ಮಂದಿಯ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದು, ಅವರ ಆಸ್ತಿಯ ಒಟ್ಟು ಮೌಲ್ಯ 88 ಬಿಲಿಯನ್ ಡಾಲರ್.
ಮುಖೇಶ್ ಅಂಬಾನಿ ನಂತರ ಅದಾನಿ ಗ್ರೂಪ್ಸ್ ನ ಗೌತಮ್ ಅದಾನಿ ಸ್ಥಾನ ಪಡೆದಿದ್ದು, ಇವರ ಆಸ್ತಿಯ ಒಟ್ಟು ಮೌಲ್ಯ 25 ಬಿಲಿಯನ್ ಡಾಲರ್. ಮುಖೇಶ್ ಅಂಬಾನಿ ಕಳೆದ ಒಂದು ದಶಕದಿಂದಲೂ ಫೋರ್ಬ್ಸ್ ನ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆಯುತ್ತಿದ್ದು, ಇದೀಗ 13ನೇ ವರ್ಷವೂ ಅಗ್ರಸ್ಥಾನ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಫೋರ್ಬ್ಸ್ ವರದಿ ಪ್ರಕಾರ, ಪ್ರಸಕ್ತ ಸಾಲಿನಲ್ಲಿ ಮುಖೇಶ್ ಅಂಬಾನಿ ಆಸ್ತಿ ಮೌಲ್ಯದಲ್ಲಿ 37.5 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದೆ. ಜಾಗತಿಕವಾಗಿ ಆರ್ಥಿಕ ಹಿಂಜರಿಕೆಯಲ್ಲಿಯೂ ಭಾರತದ ಶ್ರೀಮಂತ ವ್ಯಕ್ತಿ ಅಂಬಾನಿ ಅವರ ಆಸ್ತಿಯ ಮೌಲ್ಯವನ್ನು ಕಾಪಾಡಿಕೊಂಡಿರುವುದಾಗಿ ವಿವರಿಸಿದೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಹರಿಯಿತು ನೆತ್ತರಕೋಡಿ: ಸಿನಿಮೀಯ ರೀತಿಯಲ್ಲಿ ಮನೆಯೊಳಗೆ ನುಗ್ಗಿ ಗುಂಡಿನ ದಾಳಿ
ಮುಖೇಶ್ ಅಂಬಾನಿ ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದು, ಲಸಿಕೆ ತಯಾರಿಕೆಯ ಸೈರಸ್ ಪೂನಾವಾಲ್ಲಾ ಹತ್ತನೇ ಸ್ಥಾನ ಪಡೆದಿದೆ. ಬಯೋಕಾನ್ ನ ಕಿರಣ್ ಮಜುಂದಾರ್ ಅವರ ಆಸ್ತಿಯ ಮೌಲ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಫೋರ್ಬ್ಸ್ ಇಂಡಿಯಾ ತಿಳಿಸಿದೆ.