Advertisement
ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ವಿವರ ನೀಡಿದರು. ಈ ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ಕೌಶಲಾಭಿವೃದ್ಧಿ ಸಚಿವರಿಗೆ ನೀಡಿ ದ್ದೇವೆ. ಜನವರಿಯಲ್ಲಿ ಈ ಯೋಜನೆಯ ಉದ್ಘಾಟನೆ ನಡೆಯಲಿದ್ದು, ಅಧಿಕೃತ ದಿನಾಂಕವನ್ನು ಸಚಿವರು ಪ್ರಕಟಿಸಲಿದ್ದಾರೆ ಎಂದರು.
2023ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ (ವೃತ್ತಿಪರ ಕೋರ್ಸ್‌ಗಳ ಸಹಿತ) ಪ್ರತೀ ತಿಂಗಳು 3 ಸಾವಿರ ರೂ. ನಿರುದ್ಯೋಗ ಭತ್ತೆ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತೀ ತಿಂಗಳು 1,500 ರೂ. ನಿರುದ್ಯೋಗ ಭತ್ತೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡುವುದು ಯುವ ನಿಧಿ ಯೋಜನೆ. ಷರತ್ತುಗಳೇನು ?
ಪದವಿ / ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೆ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆಯು ಅನ್ವಯವಾಗಲಿದೆ. ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಸೌಲಭ್ಯ ಸ್ಥಗಿತಗೊಳಿಸಲಾಗುವುದು. ಭತ್ತೆಯನ್ನು ಡಿಬಿಟಿ ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ಅನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.