Advertisement
ವಿವಿಧ ದೇಶ, ರಾಜ್ಯಗಳಿಂದ ಈಗಾಗಲೇ 20 ಸಾವಿರಗಳಷ್ಟು ಸ್ಕೌಟ್ ಗೈಡ್‌ಗಳು, ರೋವರ್ ರೇಂಜರ್ಗಳು, ಮೂಡುಬಿದಿರೆಗೆ ಬಂದಿಳಿದಿದ್ದಾರೆ. ಇಡೀ ವಿದ್ಯಾಗಿರಿ ದೇಶವಿದೇಶಗಳ ವಿದ್ಯಾರ್ಥಿಗಳಿಂದ ತುಂಬಿತುಳುಕುತ್ತಿದೆ. ಈಗಾಗಲೇ ಮಲೇಶ್ಯದ 24, ದಕ್ಷಿಣ ಕೊರಿಯದ 7 ಮಂದಿ ಸಹಿತ ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಜಾಂಬೂರಿಗೆ ದೇಶ-ವಿದೇಶಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ 7 ದಿನಗಳಿಗೆ ಅಗತ್ಯವಿರುವ ಅಗತ್ಯ ಕಿಟ್‌ನ್ನು ಒದಗಿಸಲಾಗುವುದು. ಈ ಕಿಟ್ ಬ್ಯಾಗ್, ನೀರಿನ ಬಾಟಲಿ, ಬರೆಯುವ ಪುಸ್ತಕ, ಪೆನ್ ಸೇರಿದಂತೆ 15 ಸಾಮಗ್ರಿಗಳನ್ನು ಒಳಗೊಂಡಿದೆ.
Related Articles
ಹಸಿದ ಹೊಟ್ಟೆಯನ್ನು ತಣಿಸಲು ಮೊದಲ ದಿನದಿಂದಲೇ ಮುಂಜಾನೆ 4 ಗಂಟೆಗೆ ರುಚಿಯಾದ ಉಪಹಾರ ಹಾಗೂ ಭೋಜನಕ್ಕೆ ಸಿದ್ಧತೆ ನಡೆಯುತ್ತಿದೆ. ನುರಿತ ಬಾಣಸಿಗರ ತಂಡ ಸಮಯಕ್ಕೆ ಸರಿಯಾಗಿ ಊಟೋಪಚಾರದ ನಿರ್ವಹಣೆ ಮಾಡಲಿದ್ದಾರೆ. ಆಯಾಯ ವಸತಿ ನಿಲಯಗಳಲ್ಲೇ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಪಾಕಶಾಲೆಯಲ್ಲಿ ಸುಮಾರು 3,000 ಜನರಿಗೆ ಅಡುಗೆ ಸಿದ್ಧಪಡಿಸಲಾಗುತ್ತಿದೆ. ಜಿಎಸ್‌ಬಿ, ಜೈನ್, ಬ್ರಾಹ್ಮಣ ಶೈಲಿಯ ಕರಾವಳಿ ರುಚಿಯ ಖಾದ್ಯಗಳು ಇರಲಿವೆ.
Advertisement
ಜಾಂಬೂರಿಗೆ ಆಗಮಿಸಿರುವ ಮಕ್ಕಳಿಗೆ ಸಿನೆಮಾ ವೀಕ್ಷಣೆಗೆ ಕೂಡ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಆಳ್ವಾಸ್ ಕಾಲೇಜಿನಲ್ಲೇ ಇರುವ “ಕುವೆಂಪು’, “ಶಿವರಾಮ ಕಾರಂತ’ ಎಂಬ ಎರಡು ಟಾಕೀಸ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ದಿನಕ್ಕೆ ನಾಲ್ಕು ಶೋಗಳಿರುತ್ತವೆ. ಇತ್ತೀಚೆಗಿನ ಹಿಟ್ ಸಿನೆಮಾಗಳಾದ “ಕಾಂತಾರ’, “ಚಾರ್ಲಿ 777′, “ಭಜರಂಗಿ ಭಾಯಿ ಜಾನ್’, ಮಕ್ಕಳ ಆಂಗ್ಲ ಭಾಷಾ ಸಿನೆಮಾ “ಅಪ್’ ಪ್ರದರ್ಶನಗೊಳ್ಳಲಿವೆ. ಅಲ್ಲಲ್ಲಿ ಆಕರ್ಷಕ ಪ್ರತಿಮೆಗಳು
ವಿದ್ಯಾಗಿರಿಯಲ್ಲಿ ಜಾಂಬೂರಿಗಾಗಿ ವಿಶೇಷ ಕೃಷಿಮೇಳವನ್ನು ರೂಪಿಸಲಾಗಿದೆ. ಅದರ ಸುತ್ತಲೂ ಆಕರ್ಷಕ ಹಾಗೂ ಸಮಕಾಲೀನ ಸಾರ ಹೊಂದಿದ ಪ್ರತಿಮೆಗಳು ಗಮನಸೆಳೆಯಲಿವೆ. ಹೂಗಿಡಗಳ ಸಿಂಗಾರದೊಂದಿಗೆ ಯೋಗಿನಿ, ಶ್ರೀಕೃಷ್ಣ, ತಾಯಿ -ಮಗು ಇತ್ಯಾದಿ ಪ್ರತಿಮೆಗಳು ಆಕರ್ಷಿಸುತ್ತಿವೆ. ಮೊಬೈಲಲ್ಲೂ ವೀಕ್ಷಿಸಿ
ಜಾಂಬೂರಿಗೆ ಸಹಸ್ರಾರು ವಿದ್ಯಾರ್ಥಿಗಳು, ಶಿಕ್ಷಕರು, ಹೆತ್ತ ವರು ಸಹಿತ ಸಾರ್ವಜನಿಕರೂ ಆಗಮಿಸಲಿದ್ದು, ಇವರೆಲ್ಲರ ಅನುಕೂಲಕ್ಕಾಗಿ 5 ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ, ಮನೋರಂಜನ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಚಟುವಟಿಕೆ ಗಳನ್ನು ನೇರಪ್ರಸಾರದ ಮೂಲಕ “ಆಳ್ವಾಸ್ ಎಜುಕೇಶನ್ ಫೌಂಡೇಶನ್’ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದ ಕ್ಯೂಆರ್ ಕೋಡ್‌ನ್ನು ಕ್ಯಾಂಪಸ್‌ನ ವಿವಿಧೆಡೆ ಬಿತ್ತರಿಸಲಾಗಿದೆ. ಹೂಗಳ ಶೃಂಗಾರ
ಇಡೀ ವಿದ್ಯಾಗಿರಿ ಕ್ಯಾಂಪಸ್‌ಗಳಲ್ಲಿ ಆಗಮಿಸುವವರ ಕಣ್ಮನ ಸೆಳೆಯುವುದಕ್ಕಾಗಿ ಪುಷ್ಪಸಹಿತ ಗಿಡಗಳನ್ನು ಜೋಡಿಸಲಾಗಿದೆ. ಕ್ಯಾಂಪಸ್‌ನ ಆಯ್ದ ಇಳಿಜಾರು ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವುಗಳಲ್ಲಿ ಚೆಂಡು ಹೂ, ವರ್ಣರಂಜಿತ ಕ್ರೋಟನ್, ಪುಟಾಣಿ ಸಸ್ಯಗಳು, ಲಿಲ್ಲಿ, ಜೀನಿಯಾ, ಗುಲಾಬಿ ಇತ್ಯಾದಿಗಳನ್ನು ಜೋಡಿಸಲಾಗಿದ್ದು ಗಮನ ಸೆಳೆಯುತ್ತಿವೆ. ಅಮೆರಿಕ, ಹಾಲಂಡ್, ಜಪಾನ್, ಥಾಯ್‌ಲ್ಯಾಂಡ್, ತೈವಾನ್ ದೇಶಗಳಿಂಧ ಬೀಜಗಳನ್ನು ತಂದು ಬೆಳಗಾವಿ, ಪುಣೆಯಲ್ಲಿ ಸಸ್ಯಾಭಿವೃದ್ಧಿ ಪಡಿಸಿ ಅಲ್ಲಿಂದ ಆಳ್ವಾಸ್ ಕ್ಯಾಂಪಸ್ ಗೆ ತರಲಾಗಿದೆ. ಒಟ್ಟು ಸುಮಾರು 2 ಲಕ್ಷ ಗಿಡಗಳನ್ನು ಇಲ್ಲಿ ಜೋಡಿಸಲಾಗಿದೆ.