ಮುಧೋಳ: ನಗರದ ಜೀವನಾಡಿ ಮಹಾರಾಣಿ ಕೆರೆಗೆ ಪೂರೈಕೆಯಾಗುವ ನೀರು ಹರಿದು ಬರುವ ಕಾಲುವೆಯಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯ ನಗರ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗದ ಆತಂಕ ಹುಟ್ಟುಹಾಕುತ್ತಿದ್ದು, ಕಾಲುವೆ ಸ್ವಚ್ಛತೆಗೆ ಮುಂದಾಗದ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ನಗರದ ಸರಿಸುಮಾರು 50 ಸಾವಿರ ಜನಸಂಖ್ಯೆಗೆ ನಿತ್ಯ ಬಳಕೆಗೆ ಸದ್ಯ ಈ ಕೆರೆಯ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಆದರೆ ಘಟಪ್ರಭಾ ನದಿಯಿಂದ ಕೆರೆಗೆ ನೀರು ಹರಿದು ಬರಲು ಮಾಡಿರುವ ಕಾಲುವೆ ಘನತ್ಯಾಜ್ಯ ಎಸೆಯುವ ತಿಪ್ಪೆಗುಂಡಿಯಂತಾಗಿರುವುದರಿಂದ ಕೆರೆಯ ನೀರು ಮಲಿನಗೊಂಡು ಸಾರ್ವಜನಿಕರಲ್ಲಿ ರೋಗದ ಭೀತಿಯನ್ನು ಹುಟ್ಟುಹಾಕಿದೆ.
ಕಾಲುವೆ ಅಕ್ಕಪಕ್ಕ ಘನತ್ಯಾಜ್ಯ: ಮಂಟೂರು ರಸ್ತೆಯ ಬಳಿಯಿರುವ ಮುಖ್ಯ ಕಾಲುವೆಯಿಂದ ಕೆರೆಗೆ ಸಣ್ಣ ಕಾಲುವೆ ನಿರ್ಮಿಸಲಾಗಿದೆ. ಅದೇ ರೀತಿ ಮಂಡಬಸಪ್ಪನ ದೇವಸ್ಥಾನದ ಪಕ್ಕದಲ್ಲಿರುವ ಮುಖ್ಯ ಕಾಲುವೆಯಿಂದ ಮತ್ತೂಂದು ಸಣ್ಣ ಕಾಲುವೆಯನ್ನು ನಿರ್ಮಿಸಲಾಗಿದೆ. ಸದ್ಯ ಈ ಎರಡೂ ಕಾಲುವೆಯಿಂದ ಘಟಪ್ರಭಾ ನದಿ ನೀರನ್ನು ಮಹಾರಾಣಿ ಕೆರೆಗೆ ಹರಿಸಲಾಗುತ್ತದೆ. ಎರಡೂ ಸಣ್ಣ ಕಾಲುವೆಗಳು ನಗರದ ಪ್ರಮುಖ ಬಡಾವಣೆ ಪಕ್ಕದಲ್ಲಿ ಹಾದು ಹೋಗಿರುವ ಕಾರಣ ಸಾರ್ವಜನಿಕರು ಕಾಲುವೆ ಅಕ್ಕಪಕ್ಕದಲ್ಲಿಯೇ ಘನತ್ಯಾಜ್ಯ ಹಾಕುತ್ತಿದ್ದಾರೆ. ಇದರಿಂದಾಗಿ ಕಾಲುವೆ ಅಕ್ಕಪಕ್ಕ ದುರ್ವಾಸನೆ ಬೀರುತ್ತಿದೆ. ಇಲ್ಲಿಯ ನೀರೇ ಕೆರೆಯಲ್ಲಿ ಸಂಗ್ರಹಗೊಳ್ಳುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಸಾರ್ವಜನಿಕ ವಾದವಾಗಿದೆ.
ಗಿಡಗಂಟಿಗಳ ಬೀಡು: ಇನ್ನು ಅಂದಾಜು 1 ಕಿ.ಮೀ. ವರೆಗೆ ಇರುವ ಕಾಲುವೆ ಅಕ್ಕಪಕ್ಕದಲ್ಲಿ ಜಾಲಿಕಂಟಿ ಗಿಡಗಂಟಿ ಹೆಚ್ಚಿನ ಪ್ರಮಾಣದಲ್ಲಿ ಬೆಳದುಕೊಂಡಿದೆ. ಸಂಬಂಧಿಸಿದ ಅಧಿಕಾರಿಗಳು ಕಾಲ ಕಾಲಕ್ಕೆ ಕಾಲುವೆ ಸ್ವಚ್ಛಗೊಳಿಸದ ಕಾರಣ ಕಾಲುವೆ ಇಕ್ಕೆಲಗಳಲ್ಲಿ ಕಸಕಡ್ಡಿಯೇ ತುಂಬಿಕೊಂಡಿದೆ. ಕಸವು ಕಾಲುವೆಯಲ್ಲಿ ಬಿದ್ದು ನೀರನ್ನು ಮುಂದಕ್ಕೆ ಹರಿಬಿಡದ ಕಾರಣ ನೀರು ನಿಂತಲ್ಲಿಯೇ ನಿಂತು ಮಲಿನಗೊಂಡು ಸೊಳ್ಳಗಳ ಉತ್ಪತ್ತಿಗೂ ಕಾರಣವಾಗುತ್ತಿದೆ. ಕಾಲುವೆ ಪಕ್ಕ ಬೆಳೆದಿರುವ ಜಾಲಿಕಂಟಿಯನ್ನು ಕಂಡೂ ಕಾಣದವರಂತೆ ಅಧಿ ಕಾರಿಗಳು ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕಾಲುವೆ
ಇಕ್ಕೆಲುಗಳಲ್ಲಿರುವ ಜಾಲಿಕಂಟಿ ತೆರವುಗೊಳಿಸಿ ನೀರು ಸರಾಗವಾಗಿ ಹರಿದುಹೋಗಲು ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹ.
ಭಯ ಉಟ್ಟಿಸುವ ವೈದ್ಯಕೀಯ ತ್ಯಾಜ್ಯ: ಕಾಲುವೆ ಕೆಲ ಭಾಗದಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಸುರಿದಿರುವುದು ಸಾರ್ವಜನಿಕರ ಆತಂಕವನ್ನು ಹೆಚ್ಚುವಂತೆ ಮಾಡಿದೆ. ವೈದ್ಯಕೀಯ ತ್ಯಾಜ್ಯ ನೀರಿನೊಂದಿಗೆ ಬೆರೆತು ಸಾಂಕ್ರಾಮಿಕ ರೋಗ ಉಲ್ಬಣಿಸುವ ಪರಿಸ್ಥಿತಿ ಇದ್ದು ಸಂಬಂ ಧಿಸಿದ ಅಧಿಕಾರಿಗಳು ಕಾಲುವೆ ಸ್ವತ್ಛತೆಗೆ ಕ್ರಮ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕೆರೆಯಲ್ಲಿನ ನೀರು ತಿಂಗಳುಗಟ್ಟಲೆ ಸಂಗ್ರಹಗೊಳ್ಳುವುದರಿಂದ ಅದು ಮಲಿನಗೊಳ್ಳುವ ಸಂಭವ ಹೆಚ್ಚಿರುತ್ತದೆ. ಹರಿದು ಬರುವ ನೀರು ಶುದ್ಧವಾಗಿದ್ದರೆ ಮಾತ್ರ ಸಾರ್ವಜನಿಕ ಬಳಕೆಗೆ ಯೋಗ್ಯ. ಆದರೆ ತ್ಯಾಜ್ಯದೊಂದಿಗೆ ಬೆರೆತು ಬರುವ ನೀರಿನಿಂದ ರೋಗ ಹರಡುವ ಸಂಭವ ಹೆಚ್ಚಿದ್ದು ಅಧಿಕಾರಿಗಳು ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತು ಕಾಲುವೆಯನ್ನು ಸ್ವತ್ಛಗೊಳಿಸಿ ಅಕ್ಕಪಕ್ಕದಲ್ಲಿ ಕಸ ಹಾಕದಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು.
ಸ್ಪಷ್ಟತೆ ಇಲ್ಲ: ಇನ್ನು ಕಾಲುವೆಗೆ ಸಂಬಂಧಿಸಿದಂತೆ ಜಿಎಲ್ ಬಿಸಿ ಹಾಗೂ ನಗರಸಭೆ ಅಧಿಕಾರಿಗಳಲ್ಲಿ ಸ್ಪಷ್ಟತೆಯೇ ಇಲ್ಲ. ಕಾಲುವೆ ಸ್ವಚ್ಛತೆ ಬಗ್ಗೆ ಜಿಎಲ್‌ಬಿಸಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಗರವ್ಯಾಪ್ತಿಯೊಳಗಿರುವುದರಿಂದ ಸ್ವಚ್ಚತಾ ಕಾರ್ಯ ನಗರಸಭೆ ಅಧಿಕಾರಿಗಳಿಗೆ ಸಂಬಂಧಪ ಡುತ್ತದೆ ಎನ್ನುತ್ತಾರೆ. ಇನ್ನು ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನೀರಾವರಿ ಇಲಾಖೆಗೆ ಸಂಬಂಧಿಸುತ್ತದೆ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಒಟ್ಟಿನಲ್ಲಿ ಅಧಿಕಾರಿಗಳ ನಮನ್ವಯತೆ ಕೊರತೆ ಮಧ್ಯೆ ಕಾಲುವೆ ತಿಪ್ಪೆಗುಂಡಿಯಂತಾಗಿರುವುದು ದುರ್ದೈವವೆ ಸರಿ.
ಕಾಲುವೆ ನಮ್ಮ ವ್ಯಾಪ್ತಿಗೆ ಬರುವುದೇ ಎಂಬುದನ್ನು ಪರಿಶೀಲಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತೇವೆ. ಸ್ಥಳ ಪರಿಶೀಲನೆ ಬಳಿಕ ಸ್ವಚ್ಛ ತೆಗೆ ಮುಂದಾಗುತ್ತೇವೆ.
*ಶಿವಪ್ಪ ಅಂಬಿಗೇರ ನಗರಸಭೆ ಪೌರಾಯುಕ್ತ
ಗೋವಿಂದಪ್ಪ ತಳವಾರ