Advertisement

Mudhol: ಸಾಂಸ್ಕೃತಿಕ ಸೇವೆಯಲ್ಲೂ ಗಣನೀಯ ಸಾಧನೆ- ಮೈಸೂರು ದಸರಾದಲ್ಲಿ ಮುಧೋಳ ಮಲ್ಲರ ಕಮಾಲ್

10:40 AM Oct 12, 2024 | Team Udayavani |

ಮುಧೋಳ: ನಾಡಹಬ್ಬ ಮೈಸೂರು ದಸರಾದಲ್ಲಿ ಈ ಬಾರಿ ಮುಧೋಳದ ಮಲ್ಲರು ಕಮಾಲ್ ಮೆರೆಯುವ ಮೂಲಕ‌ ರನ್ನನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.

Advertisement

ಅಂತಾರಾಷ್ಟ್ರೀಯ ಕುಸ್ತಿ ಅಖಾಡದಲ್ಲಿ‌ ಮುಧೋಳ ಪೈಲ್ವಾನರು ತಮ್ಮದೆ ಆದ ಹೆಸರು ಮಾಡಿದ್ದಾರೆ. ಮೈಸೂರಿನಲ್ಲಿ ಅದ್ದೂರಿಯಾಗಿ ಜರಗುವ ನಾಡಹಬ್ಬ ದಸರಾದಲ್ಲಿ ಈ ಬಾರಿ ಮುಧೋಳದ ಪೈಲ್ವಾನರು 2 ವಿಭಾಗದಲ್ಲಿ‌ ಪ್ರಥಮ ಸ್ಥಾನ ಪಡೆದು ನಾಡಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕುಸ್ತಿಯೊಂದೇ ಅಲ್ಲದೆ ಸಾಂಸ್ಕೃತಿಕ ವಿಭಾಗದಲ್ಲಿಯೂ ಈ ಬಾರಿ ಮುಧೋಳದ ಕಲಾವಿದರು ದಸರಾ ವೇದಿಕೆ ಮೇಲೆ ಸಾರ್ವಜನಿಕರಿಗೆ ಭರಪೂರ ಮನರಂಜನೆ ನೀಡಿದ್ದಾರೆ.

ಮುಧೋಳ ಮಡಿಲಿಗೆ ದಸರಾ ಕೇಸರಿ: ಅಪಾರ ಕುಸ್ತಿ ಪ್ರೇಮಿಗಳ ಎದುರು ನಡೆದ 74-86 ಕೆ.ಜಿ ವಿಭಾಗದ ದಸರಾ ಕೇಸರಿ ಪ್ರಶಸ್ತಿಗೆ ಮುಧೋಳದ ಸದಾಶಿವ ನಲವಡೆ ಪಾತ್ರರಾಗಿದ್ದಾರೆ.

ಫೈನಲ್ ಪಂದ್ಯದಲ್ಲಿ ದಾವಣಗೆರೆಯ ಪೃಲ್ವಾನ್ ಬಸವರಾಜ ಪಾಟೀಲ ಅವರನ್ನು ಮಣಿಸಿದ ಸದಾಶಿವ ಅವರು ಈ ಬಾರಿಯ ದಸರಾ ಕೇಸರಿಯಾಗಿ ಹೊರಹೊಮ್ಮಿದರು.

Advertisement

ಪೂರ್ವಜರ ಕುಸ್ತಿಯ ಪ್ರಭಾವದಿಂದ ಪೈಲ್ವಾನ್ ಆಗಿರುವ ಸದಾಶಿವ ಅವರು ಸದ್ಯ ಪುಣೆಯ ಶಿವರಾಂ ದಾದಾ ಅವರ ಗರಡಿಯಲ್ಲಿ ತಾಲೀಮು ನಡೆಸುತ್ತಿದ್ದಾರೆ. ತಂದೆ ವಿಠ್ಠಲ ನಲವಡೆ ತಾಯಿ ಕಲ್ಪನಾ ಅವರ ಪ್ರೋತ್ಸಾಹದೊಂದಿಗೆ ಧಾರವಾಡದ ಸಾಯಿ ಕ್ರೀಡಾಶಾಲೆಯಲ್ಲಿ ಪ್ರಾವಢಶಾಲೆ ಹಂತದಲ್ಲಿ ಶಂಕರಪ್ಪ ಬಂಡೋಜಿ ಅವರ ಕೈಯಲ್ಲಿ‌ ಕುಸ್ತಿಯ ಪಟ್ಟುಗಳನ್ನು ಕಲಿತು ಇಂದು ಈ ಹಂತಕ್ಕೆ ಬೆಳೆದು ನಿಂತಿದ್ದಾರೆ.

ಪ್ರತಿಕ್ಷಾಳ ಹ್ಯಾಟ್ರಿಕ್ ಸಾಧನೆ: ಮುಧೋಳದ ಮತ್ತೋರ್ವ ಯುವ ಮಹಿಳಾ‌ ಕುಸ್ತಿಪಟು ಪ್ರತಿಕ್ಷಾ ಭೋವಿ ಈ ಬಾರಿ 72 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ವಿಶೇಷವೆಂದರೆ ಪ್ರತಿಕ್ಷಾ ಮೈಸೂರು ದಸರಾದಲ್ಲಿ ನಿರಂತರವಾಗಿ 3 ಬಾರಿ ಪ್ರಥಮ ಸ್ಥಾನ ಪಡೆಯುವ ಮೂಲಕ‌ ಹ್ಯಾಟ್ರಿಕ್ ಸಾಧನೆ ಮೆರೆದಿದ್ದಾಳೆ.

2022ರಲ್ಲಿ 62 ಹಾಗೂ 2023ರಲ್ಲಿ 65 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಪ್ರತಿಕ್ಷಾ ಈ ಬಾರಿ 72 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ತಂದೆ ಸೈದು ಭೋವಿ ಹಾಗೂ ತಾಯಿ ದ್ರಾಕ್ಷಾಯಿಣಿ ಭೋವಿ ಅವರ ಪ್ರೋತ್ಸಾಹದಿಂದ ಹಳಿಯಾಳದ ಕ್ರೀಡಾಶಾಲೆಯಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಪ್ರತಿಕ್ಷಾ ಕುಸ್ತಿಯಲ್ಲಿ ಹಲವಾರು ಪ್ರಶಸ್ತಿ ಫಲಕಗಳನ್ನು ಬಾಚಿಕೊಂಡಿದ್ದಾಳೆ.

ಕೈ ತಪ್ಪಿದ ದಸರಾ ಕಂಠೀರವ: 86 ಕೆ.ಜಿ. ವಿಭಾಗದ ದಸರಾ ಕಂಠೀರವ ಪ್ರಶಸ್ತಿಗಾಗಿ ನಡೆದ ಫೈನಲ್ ಹಣಾಹಣಿಯಲ್ಲಿ‌‌ ಮುಧೋಳದ ಫೈಲ್ವಾನ್ ಬಾಪೂ ಸಾಹೇಬ ಶಿಂಧೆ ಅವರು ನಿರಾಸೆ ಅನುಭವಿಸಬೇಕಾಯಿತು. ಬಾಗಲಕೋಟೆಯ ಪೈಲ್ವಾನ್ ಶಿವಯ್ಯ ಪೂಜಾರ ಅವರ ಎದುರು ಫೈನಲ್‌ ಪಂದ್ಯ ಸೋತ ಬಾಪೂ ಸಾಹೇಬ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ರನ್ನನ ಗಧಾಯುದ್ದ ನಾಟಕ: ಈ ಬಾರಿಯ ದಸರಾದಲ್ಲಿ‌‌ ಮುಧೋಳದ ಪೈಲ್ವಾನರು ಅಖಾಡದಲ್ಲಿ‌ ಕ್ರೀಡಾ‌ಪ್ರೇಮಿಗಳನ್ನು ರಂಜಿಸಿದರೆ, ಸಾಂಸ್ಕೃತಿಕ ರಂಗದಲ್ಲಿ ಹವ್ಯಾಸಿ ಕಲಾವಿದರು ಹಾಗೂ ಸಂಗೀತ ಮೇಳದವರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಪ್ರೇಕ್ಷಕರನ್ನು ರಂಜಿಸಿದರು.

ಲೋಕಾಪುರದ ನಟರಾಜ ಹವ್ಯಾಸಿ ಕಲಾತಂಡದವರು ಮೈಸೂರಿನ ಟೌನ್ ಹಾಲ್ ನಲ್ಲಿ ನಡೆದ ನಾಟಕ‌ ಪ್ರದರ್ಶನ ನೆರದಿದ್ದ ಅಪಾರ ಕಲಾರಸಿಕರನ್ನು ರಂಜಿಸಿ ಜನಮೆಚ್ಚುಗೆಗೆ ಪಾತ್ರವಾಯಿತು.

ಸಹೋದರರ ಸಂಗೀತಕ್ಕೆ‌‌ ಮನಸೋತ ಕಲಾರಸಿಕರು: ಕಳೆದ 30 ವರ್ಷಗಳಿಂದ ನಾಟಕದಲ್ಲಿ‌ ಹಿನ್ನೆಲೆ‌ ಸಂಗೀತ ನೀಡುವ ತಾಲೂಕಿನ ಹಲಗಲಿ‌ ಗ್ರಾಮದ ಸದಾಶಿವ ಕಟ್ಟೆನ್ನವರ ಹಾಗೂ ಸೋಮಶೇಖರ ಕಟ್ಟೆವರ ಸಹೋದರರು ಈ ಬಾರಿ ಸಂಗೀತ ಕ್ಷೇತ್ರದ‌‌ ಮೂಲಕ‌ ಮುಧೋಳ‌ ತಾಲೂಕಿಗೆ ಕೀರ್ತಿ ತಂದಿದ್ದಾರೆ. ನಾದಬ್ರಹ್ಮ ಸಂಗೀತ ಸಭಾ ವೇದಿಕೆಯಲ್ಲಿ ಜರುಗಿದ ಸಂಗೀತ ಕಚೇರಿಯಲ್ಲಿ ಗಾಯಕ ಗುರುರಾಜ ಪಾಟೀಲ ಅವರ ಧ್ವನಿಗೆ ಸದಾಶಿವ ಬ್ಯಾಂಜೋ ಹಾಗೂ ಕೀಬೋರ್ಡ್ ನುಡಿಸಿದರೆ ಅವರ ಸಹೋದರ ಸೋಮು ಪ್ಯಾಡ್ ನುಡಿಸಿ‌ ಪ್ರೇಕ್ಷಕರ ಮೆವಮಚ್ಚುಗೆಗೆ ಪಾತ್ರರಾದರು.

ಸಾಂಸ್ಕೃತಿಕ ಹಾಗೂ ಕುಸ್ತಿಯಲ್ಲಿ ಈ ಬಾರಿ ಉನ್ನತ ಸಾಧನೆ ಮೆರೆದಿರುವ ಮುಧೋಳದ‌ ಪ್ರತಿಭೆಗಳಿಗೆ ತಾಲೂಕಿನ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-ಗೋವಿಂದಪ್ಪ ತಳವಾರ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next