ಮುದ್ದೇಬಿಹಾಳ: ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿರುವ ಮುದ್ದೇಬಿಹಾಳ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬೆಳಗ್ಗೆಯಿಂದ ಸರದಿಯಲ್ಲಿ ನಿಂತಿದ್ದರೂ ಸರ್ವರ್ ಸಮಸ್ಯೆಯಿಂದಾಗಿ ಬಿತ್ತನೆ ಬೀಜ ದೊರಕದೆ ನಿರಾಶರಾಗಿ ಮರಳಿದ್ದು ಇದು ಕೇಂದ್ರದ ಸಿಬ್ಬಂದಿಯ ಬೇಜವಾಬ್ಧಾರಿತನದ ಪರಿಣಾಮವಾಗಿದೆ ಎಂದು ರೈತರು ದೂರಿದ್ದಾರೆ.
ತಾಲೂಕಿನಾದ್ಯಂತ ಹದವಾಗಿ ಮಳೆ ಸುರಿದಿದ್ದು, ರೈತರು ಬಿತ್ತನೆ ಸಲುವಾಗಿ ಓಡಾಡುತ್ತಿದ್ದಾರೆ. ಈಗಾಗಲೇ ಒಂದು ವಾರದಿಂದ ಬಿತ್ತನೆ ಬೀಜ ಪೂರೈಕೆಗೆ ತಾಲೂಕು ಕೃಷಿ ಇಲಾಖೆ ಕ್ರಮ ತೆಗೆದುಕೊಂಡಿದೆ. ಆದರೆ ಸರದಿಯಲ್ಲಿ ನಿಲ್ಲುವ ರೈತರಿಗೆ ಬೀಜಗಳು ಸರಳವಾಗಿ ಸಿಗದಂತಾಗಿವೆ. ಮೇಲಿಂದ ಮೇಲೆ ಸರ್ವರ್ ಸಮಸ್ಯೆ ನೆಪ ಹೇಳುತ್ತಿರುವುದು ರೈತರ ಸಮಸ್ಯೆಗೆ ಕಾರಣವಾಗಿದೆ ಎಂದು ದೂರಿದ್ದಾರೆ.
ತಾಲೂಕಿನಲ್ಲಿರುವ ನಾಲ್ಕು ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಕೆ. ಕಿಸಾನ್ ಎಂಬ ಸೀಡ್ ಎಂಐಎಸ್ ಆನ್‌ಲೈನ್‌ನಲ್ಲಿ ಮಾರಾಟ ಮಾಡಬೇಕೆಂದು ಸರ್ಕಾರದ ಆದೇಶ ಇದೆ. ಆದರೆ ಈ ಸರ್ವರ್ ನಿಧಾನವಾಗಿ ಕೆಲಸ ಮಾಡುತ್ತಿರುವುದು ಬೀಜ ಹಂಚಿಕೆ ವಿಳಂಬಕ್ಕೆ ಕಾರಣ ಎನ್ನುವ ಮಾತು ಕೃಷಿ ಸಂಪರ್ಕ ಕೇಂದ್ರದಲ್ಲಿ ಕೇಳಿ ಬರುತ್ತಿದೆ. ರೈತರು ತೊಗರಿ ಬೀಜಕ್ಕೆ ಹೆಚ್ಚು ಬೇಡಿಕೆ ಸಲ್ಲಿಸುತ್ತಿದ್ದಾರೆ. ಈ ಭಾಗದಲ್ಲಿ ಹೆಸರು, ಸಜ್ಜೆ, ಮೆಕ್ಕೆಜೋಳಕ್ಕೆ ಬೇಡಿಕೆ ಬಂದಿದ್ದು ಅವು ಲಭ್ಯ ಇವೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್. ಯರಝರಿ ಪ್ರತಿಕ್ರಿಯಿಸಿದ್ದಾರೆ.
ಬೆಳಗ್ಗೆ ಎಂಟಕ್ಕೆ ಪಾಳಿ ಹಚ್ಚಿದ್ದೆ. ನನಗೆ ಬೇಕಾದ ಐದು ಪಾಕೀಟ್ ತೊಗರಿ ಪಡೆಯಲು ಮಧ್ಯಾಹ್ನ ಎರಡು ಗಂಟೆವರೆಗೆ ಕಾಯಬೇಕಾಯ್ತು. ಕಂಪ್ಯೂಟರ್ ಆಪರೇಟರ್ ಒಬ್ಬರನ್ನು ಹೆಚ್ಚಿಗೆ ನೇಮಿಸಿಕೊಂಡರೆ ರೈತರಿಗೆ ಕಾಯುವುದು ತಪ್ಪುತ್ತದೆ ಎಂದು ಇಣಚಗಲ್‌ನ ರೈತ ಸತೀಶ ಕಾರನೂರ, ಮುತ್ತು ತಾಳಿಕೋಟಿ ಅಸಮಾಧಾನ ತೋಡಿಕೊಂಡರು.