Advertisement

ಉಕ ಜನರಿಂದ ಕಲಾವಿದರಿಗೆ ಪ್ರೋತ್ಸಾಹ

12:01 PM Feb 10, 2020 | Naveen |

ಮುದ್ದೇಬಿಹಾಳ: ಉತ್ತರ ಕರ್ನಾಟಕದ ಜನ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಗುಣ ಹೊಂದಿದ್ದಾರೆ ಎಂದು ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಹೇಳಿದ್ದಾರೆ.

Advertisement

ಇಲ್ಲಿನ ವಿಬಿಸಿ ಪ್ರೌಢಶಾಲೆಯ ಸಿದ್ದೇಶ್ವರ ವೇದಿಕೆಯಲ್ಲಿ ಕಲಾಚೇತನ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಿದ್ದ ಮುದ್ದೇಬಿಹಾಳ ಕಲಾಜಾತ್ರೆ 2020 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಚಲನಚಿತ್ರರಂಗದಲ್ಲಿ ವಿಜಯಪುರ ಜಿಲ್ಲೆ ತಾಳಿಕೋಟೆಯ ಖ್ಯಾತ ಹಾಸ್ಯ ಕಲಾವಿದ ರಾಜು ತಾಳಿಕೋಟೆ ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ಕಲಾವಿದರು ಚಿತ್ರರಂಗ ಮತ್ತು ಕಿರು ತೆರೆಯಲ್ಲಿ, ಧಾರಾವಾಹಿಗಳಲ್ಲಿ ತಮ್ಮದೇ ಆದ ಪ್ರತಿಭೆ ಅನಾವರಣಗೊಳಿಸಿದ್ದಾರೆ. ಈ ಭಾಗದ ಜನ ಯಾವತ್ತೂ ಕಲೆ, ಕಲಾವಿದರಿಗೆ ಮನ್ನಣೆ ಕೊಡುತ್ತಲೇ ಬಂದಿದ್ದಾರೆ ಎಂದರು.

ಕಲೆಯನ್ನು ಮನರಂಜನೆಯ ಜೊತೆಗೆ ಪ್ರತಿಭೆ ಅನಾವರಣದ ವೇದಿಕೆಯನ್ನಾಗಿಯೂ ನೋಡಬೇಕು. ಕಲಾಚೇತನ ಸಾಂಸ್ಕೃತಿಕ ವೇದಿಕೆ ಈ ಭಾಗದ ಜನತೆಗೆ ಹಿರಿತೆರೆ, ಕಿರುತೆರೆ ಕಲಾವಿದರನ್ನು ಪರಿಚಯಿಸುವ ಮೂಲಕ ಸ್ತುತ್ಯರ್ಹ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿದ್ದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಈ ಭಾಗದಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಬಂದಿರುವ ಎಲ್ಲ ಕಲಾವಿದರಿಗೂ ಶುಭ ಕೋರುವುದರ ಜೊತೆಗೆ ಕಾಮಿಡಿ ಕಿಲಾಡಿಗಳು, ಸರಿಗಮಪ ಕಲಾವಿದರು, ಚಿತ್ರ ಕಲಾವಿದರು ನಡೆಸಿಕೊಡುವ ಹಾಡು, ಹಾಸ್ಯ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮವನ್ನು ರಸವತ್ತಾಗಿ ಅನುಭವಿಸುವಂತೆ ಹೇಳಿದರು.

Advertisement

ಪೌರಾಡಳಿತ ಇಲಾಖೆ ಅಧಿಕಾರಿ ಅರವಿಂದ ಜಮಖಂಡಿ, ದಲಿತ ಮುಖಂಡ ಚನ್ನಪ್ಪ ವಿಜಯಕರ ಕಲಾವಿದರ ಕುರಿತು ಮಾತನಾಡಿದರು. ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್‌.ಜಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಧುರೀಣ ಸಮಾಜಸೇವಕ ಸೋಮನಗೌಡ ಪಾಟೀಲ ನಡಹಳ್ಳಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಬಿ. ನಾವದಗಿ, ಸಮಾಜಸೇವಕ ಶಿವಶಂಕರಗೌಡ ಹಿರೇಗೌಡರ, ಅಭ್ಯುದಯ ಸೈನ್ಸ್‌ ಪಿಯು ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ, ಗದಗ ಡೈಟ್‌ ಪ್ರಾಂಶುಪಾಲ ಎಸ್‌.ಡಿ.
ಗಾಂಜಿ, ಬಸವೇಶ್ವರ ಪತ್ತಿನ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಮಲಕೇಂದ್ರಗೌಡ ಪಾಟೀಲ, ತಹಶೀಲ್ದಾರ್‌ ಜಿ.ಎಸ್‌. ಮಳಗಿ, ಪ್ರಭಾರ ಬಿಇಒ ರೇಣುಕಾ ಕಲಬುರ್ಗಿ, ಮಾದಿನಾಳ ಗ್ರಾಪಂ ಸದಸ್ಯೆ ಜನ್ನತಬಿ ದೊಡಮನಿ, ಕೃಷಿ ಅಧಿಕಾರಿ ಅರವಿಂದ ಹೂಗಾರ, ಶಿವಶಂಕರ ಸಾಲಿಮಠ, ಸಮಾಜಸೇವಕ ಅಯ್ಯೂಬ ಮನಿಯಾರ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ನಾಲತವಾಡದ ಸಮಾಜಸೇವಕ ಗಿರೀಶಗೌಡ ಪಾಟೀಲ, ರಂಗತರಂಗ ಸಂಸ್ಥೆ ಕಾರ್ಯದರ್ಶಿ ನೇತಾಜಿ ನಲವಡೆ, ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕುಟದ ಜಿಲ್ಲಾಧ್ಯಕ್ಷ ಪುಂಡಲಿಕ ಮುರಾಳ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಅಮೀನಸಾಬ ಮುಲ್ಲಾ ವೇದಿಕೆಯಲ್ಲಿದ್ದರು.

ಗಾಯಕ ಯಶುಬಸಪ್ಪ ಪ್ರಾರ್ಥಿಸಿದರು. ದಲಿತ ಸಾಹಿತಿ ಶಿವಪುತ್ರ ಅಜಮನಿ ಸ್ವಾಗತಿಸಿದರು. ಗಾಯಕ ಮತ್ತು ಸಂಗೀತ ನಿರ್ದೇಶಕ ವಿಜಯೇಂದ್ರ ಹಿರೇಮಠ ಸ್ವಾಗತಿಸಿದರು. ಕಿರುತೆರೆ ಹಾಸ್ಯಕಲಾವಿದ ಶ್ರೀಶೈಲ ಹೂಗಾರ ನಿರೂಪಿಸಿದರು. ಸಿಆರ್‌ಪಿ ಟಿ.ಡಿ. ಲಮಾಣಿ ವಂದಿಸಿದರು.

ಸಂಗೀತ ಸಂಜೆ: ಕಾರ್ಯಕ್ರಮದ ನಂತರ ಕನ್ನಡ ಚಲನಚಿತ್ರರಂಗದ ಖ್ಯಾತ ನಾಯಕನಟ ವಿಜಯ್‌ರಾಘವೇಂದ್ರ, ನಿರೂಪಕಿ ಅನುಶ್ರೀ, ಜೊತೆ ಜೊತೆಯಲಿ ಧಾರಾವಾಹಿಯ ಮುಖ್ಯ ಪಾತ್ರಧಾರಿ ಅನು ಸಿರಿಮನೆ, ಗಾಯಕ ಹನುಮಂತ, ಮಿಮಿಕ್ರಿ ಗೋಪಿ, ವಿವಿಧ ಕಲಾವಿದರಾದ ಮಿಂಚು, ಅಪ್ಪಣ್ಣ, ಸೂರಜ್‌, ಸೂರ್ಯ, ಸದಾನಂದ ಚಿದಂಬರ, ಶಿವಾನಂದ, ವಾಣಿ, ಜ್ಯೂನಿಯರ್‌ ಅಂಬರೀಷ, ಬಾಲಕಲಾವಿದರಾದ ಮಾನ್ಯಾ, ಧ್ಯಾನಾ, ಮಹಾಲಕ್ಷ್ಮೀ, ಅರ್ಜುನ್‌, ಸ್ಥಳೀಯ ಕಲಾವಿದರು ಸೇರಿದಂತೆ ಹಲವರು ಸಂಗೀತ ಸಂಜೆ ನಡೆಸಿಕೊಟ್ಟರು.

ಈ ವೇಳೆ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಚಲನಚಿತ್ರದ ಹಾಡೊಂದನ್ನು ಹಾಡಿದ ವಿಜಯ್‌ ರಾಘವೇಂದ್ರ ಅವರು ತಮ್ಮ ನಾಯಕತ್ವದಲ್ಲಿ ಹೊರಬಂದಿರುವ ಮಾಲ್ಗುಡಿ ಡೇಜ್‌ ಚಲನಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಆಯೋಜಕ ಕಲಂದರ್‌ ದೊಡಮನಿ, ಶಿವಾನಂದ ಸಿಂದಗಿ, ಕಿರುತೆರೆ ಹಾಸ್ಯಕಲಾವಿದರಾದ ಗೋಪಾಲ ಹೂಗಾರ, ಗೋಪಾಲ ಇಂಚಗೇರಿ ಸೇರಿದಂತೆ ಹಲವರು ಸಂಗೀತ ಸಂಜೆ ನಡೆಸಿಕೊಟ್ಟರು. ಪಿಎಸೈ ಮಲ್ಲಪ್ಪ ಮಡ್ಡಿ ಪೊಲೀಸ್‌ ಬಂದೋಬಸ್ತ್ ಒದಗಿಸಿದ್ದರೆ, ಬೆಂಗಳೂರಿನಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಬೌನ್ಸರ್‌ಗಳು ಕಲಾವಿದರಿಗೆ ಸೂಕ್ತ ರಕ್ಷಣೆ ನೀಡಿದರು. ವಿಜಯ್‌ ರಾಘವೇಂದ್ರ, ಅನುಶ್ರೀ, ಅನು ಸಿರಿಮನೆ, ಹನುಮಂತ ಸೇರಿದಂತೆ ಹಲವು ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next