Advertisement

Belthangady: ಕೃಷಿ, ಕರಕುಶಲ ಕಲೆಗಳ ವೈಭವ

12:57 PM Nov 28, 2024 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ ಎಂದರೆ ಭಕ್ತಿ, ಜ್ಞಾನ, ಸುಜ್ಞಾನದ ಜತೆಗೆ ಜಗತ್ತಿನ ಹೊಸ ವಿಚಾರಗಳ ಅರಿವು, ಕೃಷಿ, ಗುಡಿ ಕೈಗಾರಿಕೆ, ವ್ಯಾಪಾರ ಮಳಿಗೆಗಳ ವೈಭವವೂ ಹೌದು. ಧರ್ಮಸ್ಥಳದ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ವಸ್ತುಪ್ರದರ್ಶನ ಕಲೆ, ಸಂಸ್ಕೃತಿ, ಪರಂಪರೆಗಳ ಹೊಸ ಲೋಕವನ್ನೇ ತೆರೆದಿಟ್ಟು ಭಕ್ತರ ಕಣ್ಮನ ಸೆಳೆಯುತ್ತಿದೆ.

Advertisement

ವಿವಿಧ ಇಲಾಖೆಗಳು, ನಾನಾ ವ್ಯಾಪಾರಗಳು ಸೇರಿ 318 ಮಳಿಗೆಗಳು ಇಲ್ಲಿವೆ. ಪುಸ್ತಕಗಳು, ಕೃಷಿ ಸಲಕರಣೆಗಳು, ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳು, ಕಲೆ, ಸಂಸ್ಕೃತಿ ಹಾಗೂ ಗ್ರಾಮೀಣ ಕರಕುಶಲ ಕಲೆಗಳಿಗೆ ಸಂಬಂಧಪಟ್ಟ ಮಣ್ಣಿನ ಮಡಿಕೆ, ಬುಟ್ಟಿ, ಪಾರಂಪರಿಕವಾಗಿ ಬಳಸುತ್ತಿದ್ದ ಗುಡಿಕೈಗಾರಿಕೆ ವಸ್ತುಗಳು, ಕೈಮಗ್ಗದ ಸೀರೆಗಳು, ಮಕ್ಕಳು, ಮಹಿಳೆಯರಿಗೆ ಬೇಕಾದ ತರಹೇವಾರಿ ವಸ್ತುಗಳ ಮಳಿಗೆಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಳಿಗೆಯಲ್ಲಿ, ಮಡಿಕೆ ತಯಾರಿ, ಹಾಳೆತಟ್ಟೆಗಳ ಮಳಿಗೆ, ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಮಳಿಗೆ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಳಿಗೆ ಪ್ರೇಕ್ಷಕರ ಕಣ್ಮನ ಸೆಳೆಯುತ್ತವೆ. ಇಲ್ಲಿ ಶುದ್ಧ ಗಂಗಾ, ಕೆರೆ ನಿರ್ಮಾಣ, ಯಾಂತ್ರಿಕ ಬೇಸಾಯ ಸಹಿತ ಯೋಜನೆಯ ಪ್ರತಿಯೊಂದು ಕಾರ್ಯಕ್ರಮದ ಪ್ರಾತ್ಯಕ್ಷಿಕೆ ಇಡಲಾಗಿದೆ. ಕರ್ನಾಟಕ ಬ್ಯಾಂಕ್‌, ಕೆನರಾ ಬ್ಯಾಂಕ್‌, ಜೀವವಿಮೆ, ಸರಕಾರದ ವಿವಿಧ ಇಲಾಖೆಗಳ ಮಳಿಗೆಗಳು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡುತ್ತಿವೆ.

ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತೀದಿನ ಸಂಜೆ ಗಂಟೆ 6.30 ರಿಂದ ರಾತ್ರಿ 10.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Advertisement

ಭಕ್ತರಿಂದ ಕ್ಷೇತ್ರಕ್ಕೆ ಬೆಳೆ ಅರ್ಪಣೆ
ರಾಜ್ಯದ ವಿವಿಧ ಭಾಗಗಳಿಂದ ಸರಕಾರಿ ಬಸ್‌ಗಳ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಹಲವಾರು ಮಂದಿ ಪಾದಯಾತ್ರೆಯಲ್ಲಿ, ಸೈಕಲ್‌ ಮೂಲಕವೂ ಬರುತ್ತಿರುವುದು ವಿಶೇಷವಾಗಿದೆ. ಭಕ್ತರು ತಾವು ಬೆಳೆದ ತರಕಾರಿ, ಹಣ್ಣುಹಂಪಲು, ಅಕ್ಕಿ, ದವಸಧಾನ್ಯಗಳನ್ನು ಕ್ಷೇತ್ರಕ್ಕೆ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಸಾವಿರಾರು ಮಂದಿ ಸೇರಿದರೂ ಶಿಸ್ತು, ಸ್ವತ್ಛತೆ, ದಕ್ಷತೆ ಹಾಗೂ ದೇಗುಲ ಸಿಬಂದಿ ಮತ್ತು ಸ್ವಯಂ ಸೇವಕರ ನಗುಮೊಗದ ಸೇವೆ ಭಕ್ತರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.

ವಾರ್ಷಿಕ ಖರೀದಿ ಕೇಂದ್ರವಾಗಿತ್ತು!
ಕೆಲವು ದಶಕಗಳ ಹಿಂದೆ ಲಕ್ಷದೀಪೋತ್ಸವ ವಸ್ತುಪ್ರದರ್ಶನವೆಂದರೆ ಗ್ರಾಮೀಣ ಭಾಗದ ಜನರಿಗೆ ವಾರ್ಷಿಕ ಖರೀದಿಯ ಹಬ್ಬ. ಹಿಂದೆಲ್ಲ ಸ್ಟೀಲ್‌ ಪಾತ್ರೆಗಳು, ಮನೆ ಸಾಮಗ್ರಿ, ಪ್ಲಾಸ್ಟಿಕ್‌ ವಸ್ತುಗಳು, ಮಹಿಳೆಯರ ಫ್ಯಾನ್ಸಿ ವಸ್ತುಗಳು ಊರಿನಲ್ಲಿ ಸಿಗುತ್ತಿರಲಿಲ್ಲ. ಆಗೆಲ್ಲ ವರ್ಷಕ್ಕೊಮ್ಮೆ ಲಕ್ಷದೀಪೋತ್ಸವಕ್ಕೆ ಬಂದೇ ಖರೀದಿ ಮಾಡಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next