Advertisement

ಮನೆ-ಮನೆಗೆ ಪಡಿತರ ಧಾನ್ಯ ತಲುಪಿಸಿ

06:31 PM May 04, 2020 | Naveen |

ಮುದ್ದೇಬಿಹಾಳ: ಕೋವಿಡ್ ಹಾವಳಿ ಮುಗಿಯುವವರೆಗೆ ಎಲ್ಲ ಪಡಿತರ ವಿತರಕರು ಪಡಿತರ ಫಲಾನುಭವಿಗಳ ಮನೆಮೆನೆಗೆ ಪಡಿತರ ಸಾಮಗ್ರಿ ಒಯ್ದು ಕೊಡುವ ಯೋಜನೆ ರೂಪಿಸಿ ಜಾರಿಗೊಳಿಸಬೇಕು. ಇದಕ್ಕೆ ಅಗತ್ಯಬೀಳುವ ಸ್ವಯಂ ಸೇವಕರನ್ನು ತಾವು ಒದಗಿಸುವುದಾಗಿ ಶಾಸಕ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.

Advertisement

ಇಲ್ಲಿನ ದಾಸೋಹ ನಿಲಯ ಹೊರಾಂಗಣದಲ್ಲಿ ಶುಕ್ರವಾರ ನಡೆದ ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳ ಎಲ್ಲ ಪಡಿತರ ವಿತರಕರ ಸಭೆಯಲ್ಲಿ ಅವರು ಮಾತನಾಡಿದರು. ಈಗಿನ ವ್ಯವಸ್ಥೆಯಲ್ಲಿ ಪಡಿತರ ಅಂಗಡಿ ಮುಂದೆ ಶಾಮಿಯಾನ, ಸ್ಯಾನಿಟೈಸರ್‌, ಕುಡಿವ ನೀರು, ಸಾಮಾಜಿಕ ಅಂತರಕ್ಕೆ ವ್ಯವಸ್ಥೆ ಮಾಡಲೇಬೇಕು. ಮನೆಮೆನೆಗೆ ಪಡಿತರ ತಲುಪಿಸುವುದರಿಂದ ಖರ್ಚು ಉಳಿತಾಯವಾಗುವುದರ ಜೊತೆಗೆ ನೀವೂ ಸಹಿತ ಕೊರೊನಾ ಸೈನಿಕರಾಗಿ ಜನರ ಸೇವೆ ಮಾಡಲು ಇದೊಂದು ಉತ್ತಮ ಅವಕಾಶ ಎನ್ನುವುದನ್ನು ಅರಿತುಕೊಂಡು ಪಾಲಿಸಲು ಮುಂದಾಗಬೇಕು ಎಂದರು.

ನಕಾರಾತ್ಮಕ ಚಿಂತನೆಗಳನ್ನು ತೆಗೆದುಹಾಕಿ. ಪಡಿತರ ವಿತರಣೆಯಲ್ಲಿ ರಾಜಕೀಯ ಬೆರೆಸಬೇಡಿ. ಕೊರೊನಾ ಸಂಕಷ್ಟ ಕಾಲದಲ್ಲಿ ಜನರ ಸೇವೆ ದೊರಕಿದ ಸದವಕಾಶ ಎಂದು ತಿಳಿದುಕೊಳ್ಳಿ. ಯಾರಿಂದಲೂ ಹಣ ಪಡೆದುಕೊಳ್ಳಬೇಡಿ. ಇಷ್ಟುದಿನ ಪಡಿತರ ಅಂಗಡಿಕಾರನಾಗಿದ್ದೆ, ಇನ್ನು ಮುಂದೆ ಕೊರೊನಾ ಸೈನಿಕನಾಗಿ ಬಡವರ ಸೇವೆ ಮಾಡುತ್ತೇನೆ ಎಂದು ಪ್ರಮಾಣ ಮಾಡಿ. ಈ ಹೊಸ ವ್ಯವಸ್ಥೆಗೆ ಆಗೋದಿಲ್ಲ ಎನ್ನುವ ಮಾತು ಯಾರಿಂದಲೂ ಬರಬಾರದು. ಬಯೋಮೆಟ್ರಿಕ್‌ಗಿಂತ ಒಟಿಪಿಗೆ ಆದ್ಯತೆ ಕೊಡಿ. ಅತೀ ಅಗತ್ಯವಿದ್ದಲ್ಲಿ ಮಾತ್ರ ಸ್ಯಾನಿಟೈಸರ್‌ ಬಳಕೆ ಮಾಡಿ ಥಂಬ್‌ ಪಡೆದುಕೊಳ್ಳಿ. ಸರ್ಕಾರ ನಿಗದಿಪಡಿಸಿದ ಪ್ರಮಾಣದಷ್ಟೇ ಧಾನ್ಯ ಹಂಚಿಕೆ ಮಾಡಿ. ಆಹಾರಧಾನ್ಯ ಸಂಗ್ರಹಿಸುವ ಗೋದಾಮುಗಳ ಮ್ಯಾನೇಜರುಗಳು ಸ್ಥಳೀಯವಾಗಿ ವಾಸವಿರಬೇಕು ಎಂದು ಕಿವಿಮಾತು ಹೇಳಿದರು.

ಮುದ್ದೇಬಿಹಾಳ ತಹಶೀಲ್ದಾರ್‌ ಜಿ.ಎಸ್‌.ಮಳಗಿ, ತಾಳಿಕೋಟೆ ತಹಶೀಲ್ದಾರ್‌ ಅನಿಲಕುಮಾರ ಢವಳಗಿ ಮಾತನಾಡಿ, ಪಡಿತರ ಹಂಚಿಕೆ ನ್ಯಾಯಸಮ್ಮತವಾಗಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಟಾಸ್ಕ್  ಫೋರ್ಸ್‌ ರಚಿಸಲಾಗುತ್ತಿದೆ. ಈ ತಂಡದ ಸದಸ್ಯರು ದಿಢೀರ್‌ ಭೇಟಿ ನೀಡಿ ವರದಿ ಸಂಗ್ರಹಿಸುತ್ತಾರೆ. ತಪ್ಪಿತಸ್ಥರ ಲೈಸನ್ಸ್‌ ರದ್ದುಪಡಿಸಲು ಜಿಲ್ಲಾ ಧಿಕಾರಿಗೆ
ಶಿಫಾರಸು ಮಾಡುತ್ತಾರೆ. ಕೊರೊನಾ ಸಂದರ್ಭ ಮಾಡುವ ತಪ್ಪುಗಳಿಗೆ ಕ್ಷಮೆ ಇರಲ್ಲ ಎಂದು ತಿಳಿಸಿದರು. ಈ ವೇಳೆ ಕೆಲ ವಿತರಕರು ಮಾತನಾಡಿ, ಹೊಸ ಯೋಜನೆ ಅಳವಡಿಕೆ ಕಷ್ಟಕರವಾಗಬಹುದು ಎಂದರೆ ಮತ್ತೇ ಹಲವರು ಒದೊಂದು ಸೇವೆಗೆ ಸದವಕಾಶವಾಗಿದ್ದು ಮನೆಮೆನೆಗೆ ಪಡಿತರ ತಲುಪಿಸಲು ಪ್ರಯತ್ನ ನಡೆಸುವ ಭರವಸೆ ನೀಡಿದರು.

ಸಿಪಿಐ ಆನಂದ ವಾಗಮೋಡೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ, ತಾಲೂಕು ಬಿಜೆಪಿ ಅಧ್ಯಕ್ಷ ಡಾ| ಪರಶುರಾಮ ಪವಾರ, ಬಿಜೆಪಿ ಧುರೀಣರಾದ ಮಲಕೇಂದ್ರಗೌಡ ಪಾಟೀಲ, ಮನೋಹರ ತುಪ್ಪದ, ತಹಶೀಲ್ದಾರ್‌ ಕಚೇರಿ ಆಹಾರ ವಿಭಾಗದ ಶಿರಸ್ತೇದಾರ ಎ.ಬಿ.ಹಿರೇಮಠ, ಆಹಾರ ನಿರೀಕ್ಷಕರು, ಗೋದಾಮು ಮ್ಯಾನೇಜರುಗಳು, 250ಕ್ಕೂ ಹೆಚ್ಚು ಪಡಿತರ ಅಂಗಡಿಕಾರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next