Advertisement

ಸಹೋದರಿಯ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು : ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ

11:00 PM May 16, 2022 | Team Udayavani |

ಮುದ್ದೇಬಿಹಾಳ: ಭಾರತೀಯ ಸೇನೆಯ ಸೀಮಾ ಸೇನಾ ಬಲ ವಿಭಾಗದಲ್ಲಿ ಯೋಧನಾಗಿದ್ದ ಮುದ್ದೇಬಿಹಾಳ ತಾಲೂಕು ಗೆದ್ದಲಮರಿ ಗ್ರಾಮದ ಸುನೀಲ ಆನಂದ ವಿಭೂತಿ (23) ಸೋಮವಾರ ಮಧ್ಯಾಹ್ನ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಗಡಿಯಲ್ಲಿರುವ ತಂಗಡಗಿ ಹತ್ತಿರ ಕೃಷ್ಣಾ ನದಿಯ ಆಚೆ ಕಡೆ ಧನ್ನೂರ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Advertisement

2020ರಲ್ಲಿ ಸೇನೆಗೆ ಆಯ್ಕೆಯಾಗಿ ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ 14 ತಿಂಗಳ ತರಬೇತಿ ಮುಗಿಸಿ ಪ್ರಸ್ತುತ ಬಿಹಾರ ರಾಜ್ಯದಲ್ಲಿ ಕರ್ತವ್ಯದಲ್ಲಿದ್ದ ಸುನೀಲ ಅಕ್ಕನ ಮದುವೆಗಾಗಿ ರಜೆಯ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದರು. ಮೇ 14 ರಂದು ಅಕ್ಕನ ಮದುವೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಸೋಮವಾರ ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿರುವ ಅಜ್ಜಿಯ ಆರೋಗ್ಯ ವಿಚಾರಿಸಲು ಸಹೋದರನೊಂದಿಗೆ ಬೈಕ್ ಮೇಲೆ ಹೋಗಿ ಮರಳಿ ಬರುವಾಗ ಈ ದುರಂತ ಸಂಭವಿಸಿದೆ.

ದುರ್ಘಟನೆಯಲ್ಲಿ ಸುನೀಲನ ಸಹೋದರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಅವಿವಾಹಿತನಾಗಿದ್ದ ಸುನೀಲನಿಗೆ ತಂದೆ, ತಾಯಿ, ನಾಲ್ವರು ಸಹೋದರಿಯರು, ಓರ್ವ ಸಹೋದರ ಇದ್ದಾರೆ. ಸುನೀಲನ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ತಾಲೂಕಿನ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಸುನೀಲನ ಅಂತಿಮ ಕ್ರಿಯಾವಿಧಿಗಳಿಗೆ ನೆರವಾಗಿದ್ದಾರೆ. ಮೃತ ಯೋಧನ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಇದನ್ನೂ ಓದಿ : ವನಿತೆಯರ 25 ಮೀ. ಪಿಸ್ತೂಲ್‌ : ಭಾರತೀಯರ ಕ್ಲೀನ್‌ ಸ್ವೀಪ್‌ ಸಾಧನೆ

ಮಂಗಳವಾರ ಗೌರವಾರ್ಪಣೆ-ಅಂತ್ಯಕ್ರಿಯೆ:
ಮಂಗಳವಾರ ಬೆಳಿಗ್ಗೆ 9 ಗಂಟೆ ನಂತರ ಶವವನ್ನು ಹಸ್ತಾಂತರಗೊಳಿಸಿದ ಮೇಲೆ ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತ ಮಾರ್ಗವಾಗಿ ಹಳೇ ತಹಶೀಲ್ದಾರ್ ಕಚೇರಿ ಎದುರಿಗೆ ಇರುವ ಸೈನಿಕ ಮೈದಾನದಲ್ಲಿ ಯೋಧನ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಮೆರವಣಿಗೆ ಮೂಲಕ ತರಲಾಗುತ್ತದೆ. ನಂತರ ಗೆದ್ದಲಮರಿ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಸಕಲ ಸೇನಾ ಗೌರವಗಳ ಸಮೇತ ಅಂತಿಮ ಕ್ರಿಯಾವಿಧಿ ನಡೆಸಲಾಗುತ್ತದೆ. ಬೆಳಗಾವಿಯಲ್ಲಿರುವ ಸೇನೆಯ ವಿಭಾಗದ ಮುಖ್ಯಸ್ಥರಿಗೆ ಸುನೀಲನ ಸಾವಿನ ಮಾಹಿತಿ ನೀಡಿದ್ದು ಅಲ್ಲಿಂದ ಗೌರವ ನಮನ ಸಲ್ಲಿಸಲು ತಂಡವೊಂದು ಬರಲಿದೆ ಎಂದು ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್.ಐ.ಹಿರೇಮಠ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next