ಮುದ್ದೇಬಿಹಾಳ: ನಿತ್ಯ ಒಂದೊಂದು ಜಿಲ್ಲಾ ಪಂಚಾಯಿತಿ ಕ್ಷೇತ್ರದಂತೆ ತಾಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲ 5 ಜಿಪಂ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯಡಿ ಭೂರಹಿತ ಕೃಷಿ ಕೂಲಿಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ನೋಂದಣಿ ಕಾರ್ಯದ ಪ್ರಗತಿ ಪರಿಶೀಲಿಸುವೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಗುರುವಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜೂನ್ 12ರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚಾರ ಆರಂಭಿಸಿ ಪರಿಶೀಲನಾ ಕಾರ್ಯ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇನೆ. ಹೀಗಾಗಿ ಆಯಾ ಗ್ರಾಪಂ ಪಿಡಿಒಗಳು, ತಾಲೂಕು ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜೂ. 12ರಂದು ಯರಝರಿ, 13ರಂದು ರಕ್ಕಸಗಿ, 14ರಂದು ಹಿರೇಮುರಾಳ, 15ರಂದು ಕೊಣ್ಣೂರ ಹಾಗೂ 16ರಂದು ಬಸರಕೋಡ ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳಿಗೆ ಭೇಟಿ ನೀಡುತ್ತೇನೆ. ಸಂಬಂಧಿಸಿದ ಅಧಿಕಾರಿಗಳು ನನ್ನ ಜತೆಯಲ್ಲಿ ಬರಲಿದ್ದಾರೆ. ಆಯಾ ಗ್ರಾಪಂ ವ್ಯಾಪ್ತಿಯ ಕಾರ್ಮಿಕರನ್ನು ಗ್ರಾಪಂನ ಪಿಡಿಒಗಳೇ ಗ್ರಾಪಂ ಕಚೇರಿಗೆ ಕರೆತರತಕ್ಕದ್ದು. ಸ್ಥಳದಲ್ಲೇ ಉದ್ಯೋಗ ಖಾತ್ರಿ ನೋಂದಣಿ, ಜಾಬ್ ಕಾರ್ಡ್ ಸೇರಿ ಅಗತ್ಯ ಚಟುವಟಿಕೆ ನಡೆಸಬೇಕು. ಇದೇ ಸಂದರ್ಭ ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳು, ಕಂದಾಯ ಇಲಾಖೆಯ ಸರ್ಕಲ್‌ಗಳು ಸ್ಥಳದಲ್ಲಿದ್ದು, ಅರ್ಹರಿಗೆ ಪಡಿತರ ಕಾರ್ಡ್, ಸಾಮಾಜಿಕ ಭದ್ರತಾ ಯೋಜನೆ ಅಡಿ ವಿವಿಧ ಮಾಸಾಶನ ಸೇರಿ ಸರ್ಕಾರದ ಸೌಲಭ್ಯ ಒದಗಿಸಲು ಕ್ರಮ ಕೈಕೊಳ್ಳಬೇಕು ಎಂದು ತಿಳಿಸಿದರು.
ಸದ್ಯ ಮಳೆ ಪ್ರಾರಂಭವಾಗಿದೆ. ಪರಿಶೀಲನೆ ನಡೆಸುವ ಸಮಯ ಮಳೆ ಬರುವ ವಾತಾವರಣ ಕಂಡುಬಂದಲ್ಲಿ ಪಂಚಾಯಿತಿ ಕೇಂದ್ರಸ್ಥಾನದವರನ್ನು ಮಾತ್ರ ಕರೆಸಿ ಸೌಲಭ್ಯ ವಿತರಿಸಬೇಕು. ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಜನರನ್ನು ಕರೆಸುವ ಅಗತ್ಯ ಇಲ್ಲ. ಮಳೆ ನಿಂತ ಮೇಲೆ ಅವರನ್ನೂ ಪಂಚಾಯಿತಿಗೆ ಕರೆಸಿಕೊಂಡು ಸೌಲಭ್ಯ ಒದಗಿಸಿಕೊಡಬೇಕು. ಒಟ್ಟಾರೆ ಆಯಾ ಸಂದರ್ಭದ ಪರಿಸ್ಥಿತಿಗನುಸಾರ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಕುರಿತು ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ಶಶಿಕಾಂತ ಶಿವಪುರೆ, ಭೂರಹಿತ ಕೃಷಿ ಕಾರ್ಮಿಕರ ಸಮೀಕ್ಷೆ ನಡೆಸಿದ ವೇಳೆ ಅಂದಾಜು 5000 ಕುಟುಂಬಗಳ ವರದಿ ಸಿಕ್ಕಿದ್ದು, ಅವರು ಹಾಗೂ ವಲಸೆ ಕಾರ್ಮಿಕರು ಸೇರಿ ಒಟ್ಟಾರೆ ಅಂದಾಜು 12000ವರೆಗೆ ಕಾರ್ಮಿಕರು ಲಭ್ಯವಿದ್ದಾರೆ. ಇವರೆಲ್ಲರಿಗೂ ಉದ್ಯೋಗ ಖಾತ್ರಿ ಅಡಿ ಉದ್ಯೋಗ ದೊರಕಿಸಿಕೊಡಲು ಕ್ರಮ ಕೈಕೊಳ್ಳಲಾಗುತ್ತದೆ. ಜೂ.15 ಮತ್ತು 16ರಂದು ರಾಜ್ಯತಂಡ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯವರ ತಂಡ ಈ ತಾಲೂಕಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಲಿದ್ದು, ಆ ಎರಡು ದಿನಗಳಂದು ಶಾಸಕರ ಪರಿಶೀಲನೆಗೆ ತೊಡಕಾಗಬಹುದಾಗಿದೆ. ಒಂದು ವೇಳೆ ರಾಜ್ಯ ತಂಡ ಬಂದಲ್ಲಿ ಆ ಎರಡು ದಿನಗಳ ಶಾಸಕರ ಪರಿಶೀಲನಾ ಕಾರ್ಯಕ್ರಮವನ್ನು ನಂತರದ ದಿನಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ತಹಸೀಲ್ದಾರ್ ಜಿ.ಎಸ್.ಮಳಗಿ ಈ ಸಂದರ್ಭ ಹಾಜರಿದ್ದು ಎಲ್ಲ ಗ್ರಾಮಲೆಕ್ಕಿಗರಿಗೆ, ಕಂದಾಯ ಇಲಾಖೆ ಸರ್ಕಲ್‌ಗಳಿಗೆ, ನಾಡಕಚೇರಿ ಉಪ ತಹಸೀಲ್ದಾರ್ ಗಳಿಗೆ ಶಾಸಕರ ಪರಿಶೀಲನಾ ಸಭೆಗೆ ಕಡ್ಡಾಯವಾಗಿ ಹಾಜರಿರಬೇಕು ಮತ್ತು ಸರ್ಕಾರದ ಸೌಲಭ್ಯ ಒದಗಿಸಲು ಕ್ರಮ ಕೈಕೊಳ್ಳಬೇಕು ಎಂದು ನಿರ್ದೇಶನ ನೀಡುವುದಾಗಿ ತಿಳಿಸಿದರು.