ಮುದ್ದೇಬಿಹಾಳ: ಕೋವಿಡ್ ವಿಶ್ವವನ್ನೇ ತಲ್ಲಣಗೊಳಿಸಿದೆ. ಲಾಕ್‌ಡೌನ್‌ದಿಂದಾಗಿ ಮನೆಯಲ್ಲೇ ಕುಳಿತು ಕೆಲಸ ಮಾಡುವ ಅನಿವಾರ್ಯತೆ ಅನೇಕರಿಗೆ ಇದೆ. ಇದನ್ನು ಸದಉಪಯೋಗ ಪಡಿಸಿಕೊಂಡ ಈಜಿಪ್ತ್ ನ ಕೈರೋದ ವಿಶ್ವವಿಖ್ಯಾತ ಪಿರ್ಯಾಮಿಡ್ ಬಳಿ ವಾಸವಿರುವ ಕನ್ನಡಿಗ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಡಾ| ಚಂದ್ರಶೇಖರ ಬಿರಾದಾರ ಮನೆ ಟರೇಸ್ ಮೇಲೆ ವಿವಿಧ ತರಕಾರಿ ಬೆಳೆದು ಗಮನ ಸೆಳೆದಿದ್ದಾರೆ.
ಢವಳಗಿ ಗ್ರಾಮದ ಡಾ| ಚಂದ್ರಶೇಖರ ಬಿರಾದಾರ ಕೃಷಿ ವಿಜ್ಞಾನಿಯಾಗಿದ್ದಾರೆ. ವಿವಿಧ ವಿದೇಶಿ ಕಂಪನಿಗಳಲ್ಲಿ ಭಾರತದ ಪ್ರತಿನಿಧಿಯಾಗಿ ಮಹತ್ವದ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಕೋವಿಡ್ ನಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದು, ಅಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಈಜಿಪ್ತ್ನಿಂದಲೇ ಉದಯವಾಣಿ ಜತೆ ಮಾತನಾಡಿದ್ದಾರೆ. ಈಜಿಪ್ತ್ನಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲೂ ಕೋವಿಡ್ ಹಾವಳಿ ಇದೆ. ಕನ್ನಡಿಗರೆಲ್ಲ ಒಂದೇ ಕಡೆ ನೆಲೆಸಿದ್ದೇವೆ. ಎಲ್ಲರೂ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸೋಂಕಿನಿಂದ ಸುರಕ್ಷಿತವಾಗಿದ್ದೇವೆ. ನಾವೆಲ್ಲ ಮನೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಬಿಡುವಿನ ಅವಧಿಯಲ್ಲಿ ಮನೆಯ ಟೆರೇಸ್ ಸೇರಿದಂತೆ ಲಭ್ಯ ಜಾಗದಲ್ಲಿ ಹೂವು, ತರಕಾರಿ ಬೆಳೆಯುತ್ತಿದ್ದೇವೆ. ಈ ಮೂಲಕ ದೇಶೀಯತೆಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮನೆಯಲ್ಲಿ ಸಣ್ಣ ಸ್ಥಳ ಇದ್ದರೆ ಸಾಕು ಅಂದಾಜು 50 ತರಹದ ತರಕಾರಿ ಬೆಳೆಯಬಹುದು. ಬಳಕೆ ಇಲ್ಲದ ಕಂಟೇನರ್‌ಗಳನ್ನು ಇದಕ್ಕಾಗಿ ಉಪಯೋಗಿಸಬಹುದು. 5 ಹಂತ ಮಾಡಿಕೊಂಡು ಮೊದಲ ಹಂತದಲ್ಲಿ ಗಜ್ಜರಿ, ಬೀಟರೂಟ್, ಈರುಳ್ಳಿ, ಬಳ್ಳೊಳ್ಳಿ, ಬಟಾಟಿ, ಮೂಲಂಗಿ, ಅರಿಷಿಣ, ಶುಂಠಿ, ಹೂಕೋಸು, ಗೆಣಸು, ಎರಡನೇ ಹಂತದಲ್ಲಿ ಎಲೆ ಬಿಡುವ ತರಕಾರಿಗಳಾದ ಮೆಂತೆಪಲ್ಲೆ, ಕೊತ್ತಂಬರಿ, ಸಬ್ಬಸಿಗೆ, ರಾಜಗಿರಿ, ಕಿರಕ್ ಸಾಲಿ, ದೊಡ್ಡಗೋಣಿ ಸೊಪ್ಪು, ಪಾಲಕ್, ಅರ್ಗುಲಾ, ಹುಣಸಿಕಿ ಮುಂತಾದ ಹಸಿರು ತರಕಾರಿ, ಮೂರನೇ ಹಂತದಲ್ಲಿ ಬದನೆಕಾಯಿ, ಮೆಣಸಿನಕಾಯಿ, ಬೀನ್ಸ್, ಟೊಮ್ಯಾಟೊ, ಕಾಲಿಫ್ಲವರ್, ಬಟಾಣಿ, ಕೋಸುಗಡ್ಡೆ, ಬ್ರೂಸೆಲ್ ಮೊಗ್ಗು, ಖಲೋರ್ಬಿ ಮುಂತಾದವು, ನಾಲ್ಕನೇ ಹಂತದಲ್ಲಿ ತೊಂಡೆ, ಸವತಿಕಾಯಿ, ಅವರೆ, ಚಳ್ಳಂಬರಿ ಸೇರಿ ಬಳ್ಳಿಯಲ್ಲಿ ಬೆಳೆಯುವ ತರಕಾರಿ. ಐದನೇ ಹಂತದಲ್ಲಿ ನುಗ್ಗೇಕಾಯಿ ಸೇರಿ ಎತ್ತರದಲ್ಲಿ ಬೆಳೆಯುವ ತರಕಾರಿ ಹೀಗೆ ಹತ್ತು ಹಲವು ಬಗೆಹ ತರಕಾರಿ ಬೆಳೆಯಬಹುದು ಎನ್ನುತ್ತಾರೆ ಅವರು.
ಈ ರೀತಿ ಮಾಡುವುದರಿಂದ ಮನೆಯ ವಾತಾವರಣವೂ ತಂಪಾಗಿರುತ್ತದೆ. ಆಹ್ಲಾದಕರ ಗಾಳಿ ಬೀಸುತ್ತಿರುತ್ತದೆ. ಈ ಪದ್ಧತಿಯಲ್ಲಿ ಬೆಳೆದ ತರಕಾರಿಗಳಲ್ಲಿ ಹೆಚ್ಚಿನ ಫಲ ಕೊಡುವ ಶಕ್ತಿ ಇರುತ್ತದೆ ಜೊತೆಗೆ ರುಚಿ, ಗುಣಮಟ್ಟ, ಬಾಳಿಕೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಇರುತ್ತದೆ. ಇಂಥ ಪರಿಸರ ಮನೆಯಲ್ಲಿ ನಿರ್ಮಿಸುವುದರಿಂದ ಹಕ್ಕಿಗಳು ಅಲ್ಲಿ ಬಂದು ಹೋಗಿ ಮಾಡುವುದರಿಂದ ಪಕ್ಷಿಗಳ ಕಲರವವೂ ಮನಕ್ಕೆ ಮುದ ನೀಡುವಂತಿರುತ್ತದೆ. ಕೊರೊನಾ ರೋಗದಿಂದ ಪಾರಾಗಲು ಇದು ಸೂಕ್ತ ಕ್ರಮವಾಗಿದೆ ಎಂದಿದ್ದಾರೆ.
ಡಿ.ಬಿ.ವಡವಡಗಿ