Advertisement
ಕೊಲೆಯಾದ ಪ್ರಿಯಾಂಕ ಯಾನೆ ದಾನೇಶ್ವರಿಯ ಪತಿ ಮುದ್ದೇಬಿಹಾಳ ಎಂಜಿವಿಸಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಜಿ.ಪಾಟೀಲ್, ಇವನ ಸಹೋದರ ಎಸ್.ಜಿ.ಪಾಟೀಲ, ಕಾರು ಚಾಲಕ ತಂಗಡಗಿ ಗ್ರಾಮದ ಉಮೇಶ ಕಮಲಾಪೂರ ಬಂಧಿಸಲ್ಪಟ್ಟ ಆರೋಪಿಗಳು. ಇಲ್ಲಿನ ಸಿಪಿಐ ಆನಂದ ವಾಗ್ಮೋಡೆ ನೇತೃತ್ವದಲ್ಲಿ ತನಿಖೆ ನಡೆದಿತ್ತು.
ಎಚ್.ಜಿ.ಪಾಟೀಲ್ ನಿಡಗುಂದಿ ತಾಲೂಕು ರಾಜನಾಳದ ಪ್ರಿಯಾಂಕಾ ಉರ್ಫ್ ದಾನೇಶ್ವರಿ ಮಮದಾಪೂರ ಎಂಬಾಕೆಯೊಂದಿಗೆ 2008 ರಲ್ಲಿ ವಿಜಯಪುರದಲ್ಲಿ ಮದುವೆಯಾಗಿತ್ತು. ಗಂಡ ಹೆಂಡತಿ ನಡುವೆ ಸಂಬಂಧ ಸರಿ ಇರಲಿಲ್ಲ. ಆಕೆ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಸಂಶಯ ಗಂಡನಿಗೆ ಇತ್ತು. ಹೆಂಡತಿಯ ನಡತೆಯಿಂದ ಬೇಸತ್ತು ಆಕೆಯನ್ನು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಹೋಗಿ ಬರೋಣ ಎಂದು ನಂಬಿಸಿ 2011ರ ಜುಲೈ 24 ರಂದುಕರೆದೊಯ್ದಿದ್ದರು. ದರ್ಶನ ಮುಗಿಸಿ ಮರಳಿ ಬರುವಾಗ ಕಾರಿನಲ್ಲೇ ಪ್ಲಾಸ್ಟಿಕ್ ವೈರನಿಂದ ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಅರಣ್ಯದಲ್ಲಿ ಎಸೆದು ಬಂದಿದ್ದರು. ನಂತರ ಆಕೆ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಆಂಧ್ರಪ್ರದೇಶದ ಶ್ರೀಶೈಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಾಗಿತ್ತು. ಈ ಕುರಿತು ಮೃತಳ ತಂದೆ ಬಸವರಾಜ ಮಮದಾಪೂರ ನೀಡಿದ್ದ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು.