Advertisement

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

02:23 PM Dec 19, 2024 | Team Udayavani |

ಮೂಡುಬಿದಿರೆ: ಪ್ರವಾಸಿ ತಾಣ, ಶಿಕ್ಷಣ ನಗರಿಯಾಗಿ ಬೆಳೆದುನಿಂತಿರುವ ಜೈನಕಾಶಿ ಮೂಡುಬಿದಿರೆ ಮೂಲಕ ದಿನಕ್ಕೆ ಐವತ್ತಕ್ಕಿಂತಲೂ ಅಧಿಕ ಸರಕಾರಿ ಬಸ್‌ಗಳು ಓಡಾಡುತ್ತಿದ್ದರೂ ಇಲ್ಲಿ ಬಸ್‌ಗಳಿಗೆ ನಿಲ್ದಾಣವಿಲ್ಲದೆ ಪ್ರಯಾಣಿಕರು ಪರದಾಡಬೇಕಾಗಿದೆ. ಕಾರ್ಕಳ-ಮೂಡುಬಿದಿರೆ -ಮಂಗಳೂರು ನಡುವೆ ಸರಕಾರಿ ಬಸ್‌ ಸಂಚಾರ ಆರಂಭಗೊಂಡ ಬಳಿಕ ಈ ಕೊರತೆ ಇನ್ನಷ್ಟು ದಟ್ಟವಾಗಿ ಗೋಚರಿಸಿದೆ.

Advertisement

ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಕ್ಕೆ ಬಂದು ಹೋಗುವ ಹಲವಾರು ಸರಕಾರಿ ಬಸ್‌ಗಳು ಮೂಡುಬಿದಿರೆ ಮೂಲಕವೇ ಸಾಗುತ್ತವೆ. ಇಲ್ಲಿ ಸರಿಯಾದ ನಿಲ್ದಾಣವಿಲ್ಲದೆ ಸಮಾಜ ಮಂದಿರದ ಎದುರಿನ ವಾಣಿಜ್ಯ ಸಂಕೀರ್ಣದ ಎದುರು ಹೆದ್ದಾರಿ ಪಕ್ಕ, ಆಟೋ ರಿಕ್ಷಾ ನಿಲ್ದಾಣಕ್ಕೆ ಒತ್ತಿಕೊಂಡೇ ನಿಲ್ಲುತ್ತವೆ. ಇಲ್ಲಿ ಯಾವುದೇ ನೆರಳು ಮತ್ತು ಮಳೆಯ ಆಸರೆ ಇಲ್ಲದೆ ಪ್ರಯಾಣಿಕರು ಬಸ್‌ಗಾಗಿ ಕಾಯಬೇಕಾಗಿದೆ.

ಕಳೆದ ಡಿ. 12ರಂದು ಮಂಗಳೂರು-ಮೂಡುಬಿದಿರೆ-ಕಾರ್ಕಳ ನಡುವೆ ಸರಕಾರಿ ಬಸ್‌ ಸಂಚಾರ ಆರಂಭವಾಗಿದೆ. ಆದರೆ ಪ್ರಯಾಣಿಕರಿಗೆ ಎಲ್ಲಿ ನಿಲ್ಲಬೇಕು ಎನ್ನುವ ಗೊಂದಲ ಕಾಡುತ್ತಿದೆ. ಬಸ್‌ ಮಂಗಳೂರಿನಿಂದ ಕಾರ್ಕಳಕ್ಕೆ ಹೋಗುವಾಗ ರಸ್ತೆ ಮಧ್ಯದಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಹೋಗಲಾಗುತ್ತಿದೆ. ಮರಳಿ ಬರುವಾಗ ಸಮಾಜ ಮಂದಿರದ ಎದುರು ನಿಲ್ಲಿಸಲಾಗುತ್ತದೆ.

ಹೊಸ ಸರಕಾರಿ ಬಸ್‌ಗಳನ್ನು ಖಾಸಗಿ ಬಸ್‌ ನಿಲ್ದಾಣದ ಮೂಲಕವೇ ಸಾಗುವಂತೆ ಮಾಡಬೇಕು ಎನ್ನುವ ಬೇಡಿಕೆಯನ್ನೂ ಭಾರತೀಯ ರೈತ ಸೇನೆ ಸೇರಿದಂತೆ ಕೆಲವು ಸಂಘಟನೆಗಳು ಮಾಡಿವೆ. ಅದಲ್ಲವಾದರೆ ಪುರಸಭೆಯ ರಾಜೀವ್‌ ಗಾಂಧಿ ಕಾಂಪ್ಲೆಕ್ಸ್‌ ಬಳಿ ಹಿಂದಿನ ಸರಕಾರಿ ಬಸ್‌ ನಿಲ್ದಾಣದ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಲಾಗುತ್ತಿದೆ.

ಸರಕಾರಿ ಬಸ್‌ ನಿಲ್ದಾಣಕ್ಕೆ ರಾಜೀವ್‌ ಗಾಂಧಿ ಕಾಂಪ್ಲೆಕ್ಸ್‌ ಸೂಕ್ತ
ಮೂಡುಬಿದಿರೆಯಲ್ಲಿ ಸರಕಾರಿ ಬಸ್‌ ನಿಲ್ದಾಣ ಮತ್ತು ಡಿಪೋ ಸ್ಥಾಪನೆ ಪ್ರಸ್ತಾವ ಹಿಂದಿನಿಂದಲೂ ಇದೆ. ಆದರೆ ಬೈಪಾಸ್‌ ರಸ್ತೆ ಪಕ್ಕದ ಜಾಗಕ್ಕೆ ಸಂಬಂಧಿಸಿ ಕೆಲವೊಂದು ಅಡೆತಡೆಗಳಿವೆ ಎಂಬ ಮಾತಿದೆ. ನಿಜವೆಂದರೆ, ಸರಕಾರಿ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿ, ಇಳಿಸಿ ಹೋಗಲು ಪ್ರಧಾನ ರಸ್ತೆಯಲ್ಲೇ ಇರುವ ಪುರಸಭೆಗೆ ಸೇರಿದ ರಾಜೀವ್‌ ಗಾಂಧಿ ಕಾಂಪ್ಲೆಕ್ಸ್‌ನ ಎದುರು ನಿಗದಿತ ಜಾಗವಿದೆ. ಅಲ್ಲಿ ಸರಕಾರಿ ಬಸ್‌ಗಳ ಎಂಟ್ರಿ ಪಡೆದುಕೊಳ್ಳುವ ಟಿಸಿ ಕಚೇರಿಯೂ ಇದೆ. ಮೊದಲು ಸರಕಾರಿ ಬಸ್‌ಗಳು ಇಲ್ಲಿ ನಿಂತೇ ಮುಂದುವರಿಯುತ್ತಿದ್ದವು.

Advertisement

ಆದರೆ, ಕೆಲವು ವರ್ಷಗಳ ಹಿಂದಿನಿಂದ ಕಾಂಪ್ಲೆಕ್ಸ್‌ ಎದುರಿನ ಜಾಗವನ್ನು ಖಾಸಗಿ ವಾಹನಗಳು ಅತಿಕ್ರಮಿಸಿರುವುದರಿಂದ ಬಸ್‌ಗಳಿಗೆ ಎಂಟ್ರಿ ಸಿಗುತ್ತಿಲ್ಲ. ಈಗ ಕಾರ್ಕಳ-ಮಂಗಳೂರು ನಡುವೆ ಹಲವು ಬಸ್‌ಗಳು ಹಲವು ಟ್ರಿಪ್‌ಗ್ಳಲ್ಲಿ ಓಡಾಡುವುದರಿಂದ ಸುಸಜ್ಜಿತ ವ್ಯವಸ್ಥೆ ಬೇಕಾಗಿದೆ. ಹೀಗಾಗಿ ಕಾಂಪ್ಲೆಕ್ಸ್‌ ಎದುರಿನ ಜಾಗವನ್ನು ಮರುಬಳಕೆ ಮಾಡಬಹುದು ಎಂಬ ಅಭಿಪ್ರಾಯವಿದೆ.
ಹೀಗೆ ಮಾಡಿದರೆ ಕಾಂಪ್ಲೆಕ್ಸ್‌ನ ವ್ಯಾಪಾರ ಮಳಿಗೆಗಳಿಗೂ ಅನುಕೂಲವಾಗುತ್ತದೆ. ಜತೆಗೆ ಬಸ್‌ ಪ್ರಯಾಣಿಕರಿಗೂ ನಿಲ್ಲಲು ಸುರಕ್ಷಿತ ಜಾಗ ದೊರೆಯುತ್ತದೆ.

ಸ್ಟೇಟ್‌ ಬ್ಯಾಂಕ್‌ಗೆ ಹೋಗಲು ಮನವಿ
ಕಾರ್ಕಳ-ಮೂಡುಬಿದಿರೆ- ಮಂಗಳೂರು ನಡುವಿನ ಸರಕಾರಿ ಬಸ್‌ಗಳು ಈಗ ಬಿಜೈ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಬಂಟ್ಸ್‌ ಹಾಸ್ಟೆಲ್‌- ನಂತೂರು ಮೂಲಕ ಸಾಗುತ್ತವೆ. ಮರಳಿ ಬರುವಾಗ ನಂತೂರಿನಿಂದ ಜ್ಯೋತಿಗಾಗಿ ಬಿಜೈಗೆ ತಲುಪುತ್ತವೆ. ಕಾರ್ಕಳ ಕಡೆಯಿಂದ ಬರುವಾಗ ಬಸ್‌ಗಳು ಸ್ಟೇಟ್‌ ಬ್ಯಾಂಕ್‌ಗೆ ಹೋಗಬೇಕು ಎನ್ನುವ ಬೇಡಿಕೆಯೂ ಇದೆ. ಆದರೆ, ಈ ರೀತಿಯ ಓಡಾಟಕ್ಕೆ ಪರವಾನಿಗೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

-ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next