Advertisement

ಬಲ್ನಾಡಿನ ಮುದಲಾಜೆ ಕಟ್ಟೆ ಕೆರೆ

09:45 AM May 06, 2022 | Team Udayavani |

ಪುತ್ತೂರು: ಬಲ್ನಾಡಿನ ಮುದಲಾಜೆ ಕಟ್ಟೆ ಕೆರೆ ನಿರೀಕ್ಷಿತ ಪ್ರಮಾಣದಲ್ಲಿ ನಿರ್ವಹಣೆ ಇಲ್ಲದ ಕಾರಣ ಇದ್ದೂ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಕೆರೆಯನ್ನು ಹೂಳೆತ್ತಿ ಸಮರ್ಪಕ ಬಳಕೆಗೆ ಯೋಗ್ಯವಾಗಿಸಿದರೆ ಈ ಪ್ರದೇಶದ ನೀರಿನ ಆವಶ್ಯಕತೆಯನ್ನು ಈಡೇರಿಸಬಹುದು.

ರೋಟರಿ ಕ್ಲಬ್‌ ಪುತ್ತೂರು ಯುವ ಇದರ ಆಶ್ರಯದಲ್ಲಿ ಕೆರೆಯ ಹೂಳೆತ್ತುವ ಕೆಲಸ 3 ವರ್ಷಗಳ ಹಿಂದೆ ಆರಂಭಗೊಂಡು ಆಶಾವಾದ ಮೂಡಿಸಿದೆ. ಆದರೆ ಈ ನಿಟ್ಟಿನಲ್ಲಿ ನಗರ ಯೋಜನಾ ಪ್ರಾಧಿಕಾರ, ನಗರ ಸಭೆ ಮತ್ತು ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿ ವಹಿಸಿದರೆ ಪ್ರಯೋಜನವಾದಿತು ಎನ್ನುತ್ತಾರೆ ಸಾರ್ವಜನಿಕರು.

ಮುದಲಾಜೆ ಕೆರೆ

ಪುತ್ತೂರು ಕಸಬಾ ಮತ್ತು ಬಲ್ನಾಡು ಗ್ರಾಮದಿಂದ ಸುತ್ತುವರಿದಿರುವ ಮುದಲಾಜೆ ಕಟ್ಟೆ (ಬಲ್ನಾಡು ಕೆರೆ) ಮೂಲತಃ 2.46 ಎಕರೆ ವಿಸ್ತೀರ್ಣ ಹೊಂದಿದೆ. ಈಗ ಕೇವಲ ಒಂದೂವರೆ ಎಕರೆ ಮಾತ್ರ ಉಳಿದುಕೊಂಡಿದ್ದು, ಮಿಕ್ಕುಳಿದ ಭಾಗ ಅತಿಕ್ರಮಣವಾಗಿದೆ ಎಂಬ ಆರೋಪವಿದೆ. ದಶಕಗಳ ಹಿಂದೆ ಈ ಕೆರೆ ಬೇಸಗೆಯಲ್ಲೂ ತುಂಬಿ ತುಳುಕಿ ತೋಡಿನ ಮೂಲಕ ನೀರು ಹರಿದು ಹೋಗುತ್ತಿತ್ತು. ಸುತ್ತಮುತ್ತಲ ಪರಿಸರದ ಜನರ ಪಾಲಿಗೆ ಇದು ಪ್ರಮುಖ ಜಲಮೂಲವೂ ಆಗಿತ್ತು. ವರ್ಷಗಳು ಉರುಳಿದಂತೆ ಕೆರೆಯ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಹಾಗೂ ಅತಿಕ್ರಮಣದ ಕಾರಣದಿಂದಾಗಿ ಮುದಲಾಜೆ ಕಟ್ಟೆ ವಿಸ್ತೀರ್ಣ ಕಿರಿದಾಗುತ್ತಾ ಸಾಗಿದೆ.

Advertisement

ರೋಟರಿ ಸಾಧನೆ

ರೋಟರಿ ಕ್ಲಬ್‌ ಪುತ್ತೂರು ಯುವ 2019ರಲ್ಲಿ ಕೆರೆಯ ಪುನರುತ್ಥಾನಕ್ಕೆ ಮುಂದಾಯಿತು. ಸಹಾಯಕ ಆಯುಕ್ತರು, ತಹಶೀಲ್ದಾರ್‌, ನಗರಸಭೆ, ಸಣ್ಣ ನೀರಾವರಿ ಇಲಾಖೆ ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೂಳೆತ್ತುವ ಕಾರ್ಯ ನಡೆಯಿತು. ಆರಂಭಿಕ ಹಂತದಲ್ಲಿ 500 ಚದರ ಅಡಿ ಹೂಳು ತೆಗೆಯಲಾಯಿತು. 2ನೇ ಹಂತದಲ್ಲಿ 10,000 ಚದರ ಅಡಿ ಪ್ರದೇಶದ ಹೂಳು ತೆಗೆ ಯಲಾಯಿತು. ಹೂಳೆತ್ತಲಾದ ಭಾಗದಲ್ಲಿ ಈಗಲೂ ನೀರಿದೆ.

ಪುನರ್‌ ನಿರ್ಮಾಣದ ನಿರೀಕ್ಷೆ

ನಗರ ಯೋಜನಾ ಪ್ರಾಧಿಕಾರವು ನಗರ ವಾಸಿಗಳಿಂದ ಪ್ರತೀ ವರ್ಷ ಕೆರೆ ಅಭಿವೃದ್ಧಿ ಶುಲ್ಕ ವಸೂಲು ಮಾಡುತ್ತದೆ. ಈ ಹಣದಿಂದ ಮುದಲಾಜೆ ಕಟ್ಟೆಯನ್ನು ನವೀಕರಣ ಮಾಡಬಹುದು. ಕೆರೆ ನವೀಕರಣಕ್ಕೆ ಅನುದಾನ ನೀಡುವ ಬಗ್ಗೆ 2020ರಲ್ಲಿ ಪ್ರಾಧಿಕಾರವು ಒಂದಷ್ಟು ಉತ್ಸುಕತೆ ತೋರಿತ್ತು. ಕೆರೆಯ ಗಡಿ ಗುರುತು ಮಾಡಿದರೆ ಅದರ ಅಭಿವೃದ್ಧಿಗೆ ಪ್ರಾಧಿಕಾರದ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹದಿಂದ ಸಹಾಯ ಒದಗಿಸಲು ಸಾಧ್ಯ ಎಂದು ಪ್ರಾಧಿಕಾರದ ಅಧಿಕಾರಿ ಅಭಿಲಾಷ್‌ ಪ್ರತಿಕ್ರಿಯಿಸಿದ್ದಾರೆ.

ಒತ್ತುವರಿ ಮಾಡಿದ್ದರೆ ತೆರವು

ಬಲ್ನಾಡಿನ ಮುದಲಾಜೆ ಕೆರೆ ಅತಿಕ್ರಮಣವಾಗಿದ್ದರೆ ಅದನ್ನು ತೆರವು ಮಾಡಲಾಗುವುದು. ಭವಿಷ್ಯದಲ್ಲಿ ಇದರ ಅಭಿವೃದ್ಧಿಗೆ ನಗರ ಯೋಜನಾ ಪ್ರಾಧಿಕಾರದಿಂದಲೂ ಅನುದಾನ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ಕೆರೆ ಅಭಿವೃದ್ಧಿ ವಿಚಾರದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಇದುವರೆಗೆ ಯಾವುದೇ ಸಮಗ್ರ ಯೋಜನ ವರದಿ ಸಿದ್ಧಗೊಂಡಿಲ್ಲ. ಅದೇ ರೀತಿ ಪ್ರಾಧಿಕಾರದಿಂದ ಹಣ ಬಿಡುಗಡೆ ಮಾಡುವ ಬಗ್ಗೆಯೂ ಯಾವುದೇ ಕ್ರಮ ಆಗಿಲ್ಲ. ಬನ್ನೂರಿನ ಅಲುಂಬುಡ ಕೆರೆ ಮತ್ತು ಶ್ರೀ ಮಹಾಲಿಂಗೇಶ್ವರ ದೇಗುಲದ ಸಮೀಪದ ಪುಷ್ಕರಿಣಿಯ ಅಭಿವೃದ್ಧಿಗೆ ಪ್ರಾಧಿಕಾರದ ಕಡೆಯಿಂದ ಉಪಕ್ರಮ ನಡೆದಿದ್ದು, ಬಲ್ನಾಡು ಕೆರೆಗೂ ಇದೇ ಕ್ರಮ ಅನುಸರಿಸಬೇಕೆಂಬ ಆಗ್ರಹವಿದೆ.

ಕೆರೆಯ ಸನಿಹದಲ್ಲಿ ಖಾಸಗಿ ರಸ್ತೆ

ಕೆರೆಯ ಪಕ್ಕದಲ್ಲಿ ಒಂದು ಖಾಸಗಿ ರಸ್ತೆ ಕಲ್ಪಿಸಲಾಗಿದೆ. ಇದನ್ನು ಅತಿಕ್ರಮಣ ಎಂದು ಕರೆಯಲಾಗದು. ಅಭಿವೃದ್ಧಿ ಯೋಜನೆಗೆ ಇಳಿದಾಗ ಆ ರಸ್ತೆಯನ್ನು ತೆರವು ಮಾಡಿಕೊಂಡು ಕೆಲಸ ಮಾಡಬಹುದಾಗಿದೆ. ರೋಟರಿ ಕ್ಲಬ್‌ ಪುತ್ತೂರು ಯುವದವರು ಒಂದಷ್ಟು ಹೂಳೆತ್ತುವ ಕೆಲಸ ಮಾಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್‌. ಮನೋಹರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next