ದೊಡ್ಡಬಳ್ಳಾಪುರ: ಮೊಹರಂ ಆಚರಣೆ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ನಗರದ ನಗರ್ತ ಪೇಟೆಯಲ್ಲಿನ ಬಾಬಯ್ಯ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪ್ರಾರ್ಥನೆ ನಡೆದವು. ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಮೊಹರಂ ಅಂಗವಾಗಿ ನಡೆದ ಹಸೇನ್-ಹುಸೇನ್ ಧಾರ್ಮಿಕ ವಿಧಿ ವಿಧಾನಗಳನ್ನು ಧರ್ಮಗುರುಗಳ ನೇತೃತ್ವದಲ್ಲಿ ಸಾಂಕೇತಿಕವಾಗಿ ನೆರವೇರಿಸಲಾಯಿತು.
ನಗರದ ಇಸ್ಲಾಂಪುರದ ಈದ್ಗಾ ಮೊಹಲ್ಲಾದ ಆಂಶುಖಾನಾದಲ್ಲಿ ಒಂಬತ್ತು ದಿನಗಳ ಕಾಲ ನಡೆದ ವಿಶೇಷ ಮೊಹರಂ ಬಾಬಯ್ಯನ ಪೂಜೆಯ ಸಮಾರೋಪ ನಡೆಯಿತು. ಗ್ರಾಮಾಂತರ ಪ್ರದೇಶದ ದೊಡ್ಡಬೆಳವಂಗಲ, ಕಾಡನೂರು, ಪುಟ್ಟಯ್ಯನ ಅಗ್ರಹಾರ ಮುಂತಾದ ಗ್ರಾಮಗಳಲ್ಲಿ ಮೊಹರಂ ಆಚರಣೆ ನಡೆಯಿತು.
ಬಾಬಯ್ಯನ ಹಬ್ಬ ಭಾವೈಕ್ಯತೆಯ ಸಂಕೇತ : ವಿಜಯಪುರ: ತ್ಯಾಗ ಮತ್ತು ಬಲಿದಾನದ ಸಂಕೇತ ಮೊಹರಂ ಆಚರಣೆಯನ್ನು ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮೊಹರಂ ಹಬ್ಬ ಎನ್ನುವುದಕ್ಕಿಂತ ಈ ಹಬ್ಬ ಬಾಬಯ್ಯನ ಹಬ್ಬ ಎಂದೇ ಖ್ಯಾತಿ ಪಡೆದಿದ್ದು, ಹಿಂದೂ ಮುಸ್ಲಿಮರ ಭಾವೈಕ್ಯತೆಯ ಸಂಕೇತವಾಗಿದೆ. ಪಟ್ಟಣದಲ್ಲಿ 145 ವರ್ಷಗಳಿಂದ ಬಾಬಯ್ಯನ ಹಬ್ಬ ಆಚರಣೆ ಮಾಡಲಾಗುತ್ತಾ ಬರಲಾಗುತ್ತಿದೆ ಎಂದು ತಿಳಿಸಿದರು.
ಪಟ್ಟಣದ ಗಾಂಧಿಚೌಕದಲ್ಲಿ ಮೊಹರಂ ಆಚರಣೆ ಅಂಗವಾಗಿ ಬಾಬಯ್ಯನ ಹಸ್ತ ಮತ್ತು ಅಲಾವಿಯನ್ನುಹಾಕಲಾಗುತ್ತದೆ. ಹಿಂದೂ ಮುಸ್ಲಿಮರು ಹಸ್ತಕ್ಕೆ ಕೊಬ್ಬರಿ, ಕಲ್ಲುಸಕ್ಕರೆ, ನಾಣ್ಯಗಳನ್ನು ಕೆಂಪು ಅಥವಾ ಹಸಿರು ಬಟ್ಟೆಯಲ್ಲಿ ಕಟ್ಟಿ ಹಸ್ತದ ಬಳಿ ಇಟ್ಟು ಹರಕೆ ಕಟ್ಟುತ್ತಾರೆ. ನಂತರ ಮುಂದೆ ಇರುವ ಅಲಾವಿ (ಬೆಂಕಿ)ಯಲ್ಲಿ ಚರ್ಮ ರೋಗ ನಿವಾರಣೆಯಾಗಲಿ ಎಂದು ಕೇಳಿಕೊಂಡು ಹಾಗೂ ಮಕ್ಕಳಿಲ್ಲದವರು ಹರಕೆ ಕಟ್ಟಿಕೊಂಡು ಬೆಂಕಿಗೆ ಉಪ್ಪು, ಮೆಣಸಿನಕಾಯಿ, ಮೆಣಸು ಹಾಕುವ ಪದ್ಧತಿ ಇದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆ ಇದೆ ಎಂದು ತಿಳಿಸಿದರು. ಜನಾಂಗದ ಮುಖಂಡರಾದ ಸಾರ್ಬಿ, ಸಾದತ್ ಮತ್ತಿತರರು ಉಪಸ್ಥಿತರಿದ್ದರು.