Advertisement

ಚಿಲ್ಲರೆ, ಸಗಟು ಮಾರಾಟ ವಲಯಕ್ಕೆ ಉತ್ತೇಜನ : ಎಂಎಸ್‌ಎಂಇ ವ್ಯಾಪ್ತಿಗೆ ಸೇರ್ಪಡೆ

01:46 AM Jul 05, 2021 | Team Udayavani |

ಮಂಗಳೂರು : ಚಿಲ್ಲರೆ ಮತ್ತು ಸಗಟು ಮಾರಾಟ ವಲಯಗಳನ್ನು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ವಲಯದ ವ್ಯಾಪ್ತಿಗೆ ತರುವ ಕೇಂದ್ರ ಸರಕಾರದ ನಿರ್ಧಾರ ಕೊರೊನಾ ಸಂಕಷ್ಟದಿಂದ ನಲುಗಿರುವ ಈ ಕ್ಷೇತ್ರದ ಅಭಿವೃದ್ಧಿ ಮತ್ತು ವಿಸ್ತಾರಕ್ಕೆ ಉತ್ತೇಜಕವಾಗಿ ಪರಿಣಮಿಸಲಿದೆ.

Advertisement

ಚಿಲ್ಲರೆ ಮತ್ತು ಸಗಟು (ರಿಟೈಲ್‌ ಆ್ಯಂಡ್‌ ಹೋಲ್‌ಸೇಲ್‌) ಮಾರಾಟ ಕ್ಷೇತ್ರವನ್ನು ಎಂಎಸ್‌ಎಂಇ ವ್ಯಾಪ್ತಿಗೆ ಸೇರ್ಪಡೆಗೊಳಿಸುವುದಾಗಿ ಕೇಂದ್ರ ಸಚಿವ ನಿತಿನ್‌ ಗಡ್ಕರ್‌ ಘೋಷಿಸಿದ್ದಾರೆ. ದೇಶದ ಸುಮಾರು 2.5 ಕೋಟಿ ವರ್ತಕರಿಗೆ ಇದರಿಂದ ಪ್ರಯೋಜನವಾಗಲಿದ್ದು, ದೇಶದ ಪ್ರಗತಿಗೆ ಎಂಎಸ್‌ಎಂಇ ಕ್ಷೇತ್ರದ ಕೊಡುಗೆ ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಧಾನಿ ಮೋದಿ ಈ ಕ್ರಮವನ್ನು ಶ್ಲಾಘಿಸಿದ್ದಾರೆ.

ಆದ್ಯತಾ ವಲಯ ವ್ಯಾಪ್ತಿಗೆ
ಪ್ರಸ್ತುತ ಸಾಲಸೌಲಭ್ಯದಲ್ಲಿ ಎಂಎಸ್‌ಎಂಇ ಆದ್ಯತಾ ವಲಯದಲ್ಲಿ ಗುರುತಿಸಿ ಕೊಂಡಿದೆ. ಚಿಲ್ಲರೆ ಮತ್ತು ಸಗಟು ಮಾರಾಟ ಕ್ಷೇತ್ರ ಎಂಎಸ್‌ಎಂಇಯ ಅಡಿ ಬರುವುದರಿಂದ ಉದ್ಯಮ್‌ ಪೋರ್ಟಲ್‌ನಲ್ಲಿ ನೋಂದಾ ಯಿಸಿಕೊಳ್ಳಲು ಸಾಧ್ಯವಾಗುತ್ತದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ ಸಾಲ ನೀಡಿಕೆಗೆ ಆದ್ಯತೆಯ ವಲಯವಾಗಿ ಇದೂ ಪರಿಗಣಿಸಲ್ಪಡುತ್ತದೆ.

ಸಾಲ ಮತ್ತಿತರ ಹಣಕಾಸು ಸೌಲಭ್ಯ
ಸಾಲ ಮತ್ತಿತರ ಹಣಕಾಸು ಸೌಲಭ್ಯ ಮತ್ತು ಉತ್ತೇಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 1.25 ಲಕ್ಷಕ್ಕೂ ಅಧಿಕ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇದರ ಪ್ರಯೋಜನ ಲಭಿಸಲಿದೆ.

ಎಂಎಸ್‌ಎಂಇಗಳಿಗೆ ಪ್ರಸ್ತುತ ಇರುವ ತುರ್ತುಸಾಲ ಖಾತರಿ ಯೋಜನೆ ಮತ್ತಿತರ ಕ್ರೆಡಿಟ್‌ ಗ್ಯಾರಂಟಿ ಯೋಜನೆಗಳು, ರಿಯಾಯಿತಿಗಳು, ಸೌಲಭ್ಯಗಳು ಚಿಲ್ಲರೆ ಮತ್ತು ಸಗಟು ಕ್ಷೇತ್ರಕ್ಕೂ ಲಭ್ಯವಾಗಲಿವೆ. ಇದರಿಂದಾಗಿ ಸರಕಾರ ಮತ್ತು ಬ್ಯಾಂಕಿಂಗ್‌ ಕ್ಷೇತ್ರದಿಂದ ಹೆಚ್ಚಿನ ಉತ್ತೇಜನಗಳು ಲಭ್ಯವಾಗಲಿದ್ದು, ಆರ್ಥಿಕ ಪ್ರಗತಿ ಮತ್ತು ಉದ್ಯೋಗಾವಕಾಶಗಳ ವಿಸ್ತಾರಕ್ಕೆ ಪೂರಕವಾಗಲಿದೆ ಎಂದು ಚಿಲ್ಲರೆ ಮತ್ತು ಸಗಟು ಮಾರಾಟ ಕ್ಷೇತ್ರದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

Advertisement

ಚಿಲ್ಲರೆ ಮತ್ತು ಸಗಟು ಮಾರಾಟ ಕ್ಷೇತ್ರವನ್ನು ಎಂಎಸ್‌ಎಂಇ ವಲಯಕ್ಕೆ ತರುವುದರಿಂದ ಇಲ್ಲಿ ದೊರೆಯುವ ಪ್ರಯೋಜನಗಳು ಆ ಕ್ಷೇತ್ರಕ್ಕೂ ಲಭ್ಯವಾಗಲಿದ್ದು, ಉನ್ನತಿಗೆ ನೆರವಾಗಲಿದೆ. ಒಟ್ಟು ಆರ್ಥಿಕ ಪ್ರಗತಿಗೆ ಇದರಿಂದ ಹೆಚ್ಚಿನ ಲಾಭವಾಗಬಹುದು. ಸರಕಾರ ಎಂಎಸ್‌ಎಂಇ ಕ್ಷೇತ್ರಕ್ಕೆ ಇನ್ನಷ್ಟು ಹೆಚ್ಚಿನ ಉತ್ತೇಜನಗಳನ್ನು ಮತ್ತು ಸೌಲಭ್ಯಗಳನ್ನು ನೀಡುವ ಅಗತ್ಯವಿದೆ.
– ಕೆ.ಬಿ. ಅರಸಪ್ಪ, ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ

ಚಿಲ್ಲರೆ ಮತ್ತು ಸಗಟು ಮಾರಾಟವನ್ನು ಎಂಎಸ್‌ಎಂಇ ವ್ಯಾಪ್ತಿಗೆ ಸೇರಿಸುವ ನಿರ್ಧಾರ ವಾಣಿಜ್ಯ ಕ್ಷೇತ್ರಕ್ಕೆ ಉತ್ತೇಜನದಾಯಕವಾಗಿದೆ. ಈವರೆಗೆ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜಕ ಸೌಲಭ್ಯಗಳಿರಲಿಲ್ಲ. ಹೆಚ್ಚಿನ ಸಾಲಸೌಲಭ್ಯಗಳನ್ನು ಎಂಎಸ್‌ಎಂಇಗಳಿಗೆ ಇರುವ ರಿಯಾಯಿತಿಗಳೊಂದಿಗೆ ಪಡೆಯಲು ಸಾಧ್ಯವಾಗಲಿದೆ.
-ಐಸಾಕ್‌ ವಾಜ್‌, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ

ಚಿಲ್ಲರೆ ಮತ್ತು ಸಗಟು ಮಾರಾಟ ಕ್ಷೇತ್ರವನ್ನು ಎಂಎಸ್‌ಎಂಇ ವ್ಯಾಪ್ತಿಗೆ ಸೇರಿಸುವ ನಿರ್ಧಾರ ಉತ್ತಮ. ಇದರಿಂದ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಪ್ರಸ್ತುತ ಕ್ಷೇತ್ರ ಸಾಲ ಸೌಲಭ್ಯ ಪಡೆಯಲು ಹಲವಾರು ನಿಯಮಗಳನ್ನು ಪೂರೈಸಬೇಕಾಗಿದೆ. ಎಂಎಸ್‌ಎಂಇ ವಲಯಕ್ಕೆ ಬರುವುದರಿಂದ ಇದು ನಿವಾರಣೆಯಾಗಿ ಹಣಕಾಸು ನೆರವು ಪಡೆಯಲು ಸುಲಭವಾಗಲಿದೆ. ಇದರಿಂದ ಕ್ಷೇತ್ರಕ್ಕೆ ಹಣಕಾಸಿನ ಹರಿವು ಬರಲಿದೆ. ಆದ್ಯತಾ ವಲಯದಲ್ಲಿ ಬರುವುದರಿಂದ ಕೆಲವು ಉತ್ತೇಜನಗಳು ಮತ್ತು ಸೌಲಭ್ಯಗಳು ಕೂಡ ಲಭಿಸಲಿವೆ.

-ಜಿ.ಜಿ. ಮೋಹನದಾಸ್‌ ಪ್ರಭು, ಮಂಗಳೂರು ಹಳೇ ಬಂದರು ಸಗಟು ವ್ಯಾಪಾರಿ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next