ಮುಂಬಯಿ: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲೇ ಮುಗ್ಗರಿಸಿದೆ. ಆಗ ರಾಹುಲ್ ದ್ರಾವಿಡ್ ಅವರನ್ನು ಟಿ20 ಕೋಚ್ ಸ್ಥಾನದಿಂದ ತೆಗೆಯಬೇಕು, ಇಲ್ಲವೇ ಅವರಿಗೆ ಒಬ್ಬ ಸಹಾಯಕರನ್ನಾದರೂ ನೀಡಬೇಕೆಂದು ಕೆಲವರು ಆಗ್ರಹಿಸಿದ್ದರು. ಮೂರೂ ಮಾದರಿಗಳಲ್ಲಿ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುವುದು ರಾಹುಲ್ ದ್ರಾವಿಡ್‌ಗೆ ಹೊರೆಯಾಗಲಿದೆ ಎಂಬುದು ಬಿಸಿಸಿಐ ನಿಲುವು ಕೂಡ ಆಗಿದೆ.
ಆದ್ದರಿಂದ ಅವರಿಗೆ ಟಿ20 ಜವಾಬ್ದಾರಿಯಿಂದ ಬಿಡುಗಡೆ ನೀಡಲು ಬಯಸಿದೆ ಎನ್ನಲಾಗುತ್ತಿದೆ. ಹಾಗಾದರೆ ಅವರ ಸ್ಥಾನವನ್ನು ತುಂಬುವವರು ಯಾರು ಎನ್ನುತ್ತೀರಾ? ವಿಶ್ವಶ್ರೇಷ್ಠ ನಾಯಕ ಎಂ.ಎಸ್. ಧೋನಿ! ಅವರಿಗೆ ಟಿ20 ತಂಡದ ಹೊಣೆ ವಹಿಸಲು ಬಿಸಿಸಿಐ ಅಧಿಕೃತವಾಗಿ ಮನವಿ ಕಳಿಸುವ ಸಾಧ್ಯತೆಯಿದೆ.
ದ್ರಾವಿಡ್ ಏಕದಿನ, ಟೆಸ್ಟ್ ತಂಡದ ಮುಖ್ಯ ತರಬೇತುದಾರರಾಗಿಯೇ ಮುಂದುವರಿಯಲಿದ್ದಾರೆ. ಟಿ20ಗೆ ನುರಿತ, ಪಳಗಿದ ವ್ಯಕ್ತಿಯೊಬ್ಬರು ಬೇಕಾಗುತ್ತಾರೆ. ಅದಕ್ಕೆ ಧೋನಿಗಿಂತ ಸಮರ್ಥರು ಇನ್ನೊಬ್ಬರಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯ. ಅವರು ಚೆನ್ನೈ ಪರ ಮುಂದಿನ ವರ್ಷದ ಐಪಿಎಲ್‌ನಲ್ಲಿ ಪಾಲ್ಗೊಂಡ ಅನಂತರ ನಿವೃತ್ತಿಯಾಗಲಿದ್ದಾರೆ. ಅವರನ್ನು ಬಿಸಿಸಿಐಗೆ ಎಳೆದುಕೊಳ್ಳುವುದು ಉದ್ದೇಶವಾಗಿದೆ. ಅವರಿಗೆ ಟಿ20 ತಂಡದ ನಿರ್ದೇಶಕ ಸ್ಥಾನ ನೀಡುವ ಲೆಕ್ಕಾಚಾರವಿದೆ. ಧೋನಿ ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ತಂಡದ ಮೆಂಟರ್ ಆಗಿದ್ದರು. ಆದರೆ ಆಗ ಕೇವಲ ಒಂದು ವಾರ ಮುಂಚೆ ತಂಡವನ್ನು ಕೂಡಿಕೊಂಡಿದ್ದರು. ಆ ಹಂತದಲ್ಲಿ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ. ಇನ್ನು ಮುಂದೆ ಅವರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಟಿ20 ತಂಡವನ್ನು ಪುನರೂಪಿಸುವ ಸಾಧ್ಯತೆ ಇದೆ.